ಫ್ರಾನ್ಸಿನ ವಾಸ್ತು ಮತ್ತು ಮೂರ್ತಿಶಿಲ್ಪ

	ಫ್ರಾನ್ಸಿನ ಕಲೆಯ ಪ್ರಾರಂಭ ಪೂರ್ವ ಶಿಲಾಯುಗದ ಅಂತ್ಯಕಾಲಕ್ಕೆ ಹೋಗುತ್ತದೆ. ಫ್ರಾನ್ಸಿನ ನೈಋತ್ಯ ಭಾಗದಲ್ಲಿ ಕ್ರಿ.ಪೂ. 30,000 ವರ್ಷಗಳ ಸುಮಾರಿನಲ್ಲಿ ಅಸ್ತಿತ್ವಕ್ಕೆ ಬಂದ ಆರಿಗ್ನೇಸಿಯನ್ ಸಂಸ್ಕøತಿ ಕಾಲದಲ್ಲಿ ಮೊದಲಿಗೆ ಮೂಳೆ, ಕೊಂಬು ಮತ್ತು ದಂತದ ಆಯುಧೋಪಕರಣಗಳ ಮೇಲೆ ರೇಖಾಚಿತ್ರಗಳನ್ನು ಕೊರೆಯುತ್ತಿದ್ದರು. ಕೆಲವು ಬಾರಿ ಉಪಕರಣಗಳ ಹಿಡಿಕೆಯ ತುದಿಯನ್ನು ಪ್ರಾಣಿಗಳ ತಲೆಗಳ ಆಕಾರದಲ್ಲಿ ರೂಪಿಸುತ್ತಿದ್ದರು. ಆದರೆ ಅನಂತರ ಬಂದ ಸಾಲುಟ್ರಿಯನ್ ಸಂಸ್ಕøತಿಯ ಕಾಲದಲ್ಲಿ ಕಲೆಗೆ ಹೆಚ್ಚಿನ ಪ್ರಾಶಸ್ತ್ಯವಿರಲಿಲ್ಲ. ಆದರೆ ಕ್ರಿ.ಪೂ. 1400-900ದ ನಡುವೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಮಾಗ್ಡಲೀನಿಯನ್ ಸಂಸ್ಕøತಿಯ ಕಾಲದಲ್ಲಿ ಕಲೆಗೆ ಬಹಳ ಪ್ರೋತ್ಸಾಹ ಸಿಕ್ಕಿತು. ಆ ಸಂಸ್ಕøತಿಗೆ ಸೇರಿದ, ಈಗ ಅಮೆರಿಕದ ನ್ಯಾಚುರಲ್ ಹಿಸ್ಟರಿ ವಸ್ತುಸಂಗ್ರಹಾಲಯದಲ್ಲಿ ಕಾದಿಟ್ಟಿರುವ ಹಿಮಸಾರಂಗದ ಕೊಂಬಿನಲ್ಲಿ ಮಾಡಿದ ಬಾಕುವಿನ ಹಿಡಿಯಲ್ಲಿರುವ ಹಿಮಸಾರಂಗದ ತಲೆ. ಈಟಿಯನ್ನೆಸೆಯಲು ಬಳಸುವ ಉಪಕರಣದ ಹಿಡಿಕೆಯಲ್ಲಿರುವ ಪಕ್ಷಿ ಇವು ಆ ಕಲೆಗೆ ಉತ್ತಮ ನಿದರ್ಶನಗಳು, ಡಾರ್ಡನ್ ಜಿಲ್ಲೆಯಲ್ಲಿ ದೊರಕಿರುವ, ದಂತದ ಚೂರಿನ ಮೇಲೆ ಮೂಡಿಸಿರುವ ಆನೆಯ ರೇಖಾಚಿತ್ರ. ಹಿಮಸಾರಂಗದ ಕೊಂಬಿನ ಮೇಲಿನ ಜಿಂಕೆ ಮತ್ತು ಮೀನಿನ ರೇಖಾಚಿತ್ರ ಇವು ಸತ್ತ್ವಪೂರ್ಣ ಕಲಾಕೃತಿಗಳು. ಮಧ್ಯಶಿಲಾಯುಗದಲ್ಲಿ ಈ ಕಲಾಸಂಪ್ರದಾಯ ಕಣ್ಮರೆಯಾಯಿತು. ಅಜಿಲಿಯನ್ ಸಂಸ್ಕøತಿಗೆ ಸೇರಿದ ವರ್ಣಚಿತ್ರದ ಕಲ್ಲು ಹರಳುಗಳನ್ನು ಕಲಾಕೃತಿಗಳೆಂದು ಪರಿಗಣಿಸಬಹುದಾದರೆ ಕಲಾಸಂಪ್ರದಾಯ ಆ ಕಾಲದಲ್ಲಿ ಉಳಿದಿತ್ತೆಂದು ಭಾವಿಸಬಹುದಾಗಿದೆ. ನವಶಿಲಾಯುಗ ಮತ್ತು ಕಂಚು ಯುಗಗಳಲ್ಲೂ ಹೆಚ್ಚಿನ ವ್ಯತ್ಯಾಸ ಉಂಟಾಗಲಿಲ್ಲ. ಬೃಹತ್ ಶಿಲಾಸಮಾಧಿ ಸಂಸ್ಕøತಿಯ ಕಾಲದಲ್ಲಿ ಫ್ರಾನ್ಸಿನ ವಿವಿಧ ಭಾಗಗಳಲ್ಲಿ ವಾಸ್ತುಶಿಲ್ಪ ತಲೆದೋರಿತು. ಡಾಲ್ಮೆನ್, ಮೆನ್‍ಹಿರ್, ಪ್ಯಾಸ್ಸೇಜ್ ಕೋಣೆಗೋರಿಗಳು ಹೆಚ್ಚು ಕ್ಲಿಷ್ಟರೀತಿಗಳಲ್ಲಿ ನಿರ್ಮಿತವಾದುವು, ಬ್ರಿಟನ್ ಪರ್ಯಾಯ ದ್ವೀಪದಲ್ಲಿ ಮೆನಹಿರ್‍ಗಳು ಕೆಲವು ಬಾರಿ 19.8 ಮೀಟರುಗಳಷ್ಟು ಎತ್ತರವಿರುತ್ತಿದ್ದುವು; ಇಂಥ ಹಲವು ಕಟ್ಟಡಗಳನ್ನು ಕಾರ್ನಾಕ್ ಪ್ರದೇಶದಲ್ಲಿ ಕಾಣಬಹುದು. ಈ ನಿರ್ಮಾಣಗಳಲ್ಲಿ ಕಲಾತ್ಮಕತೆ ಇದ್ದುವು. ಸ್ತಂಭಗಳನ್ನು ಮಾನವ ರೂಪದಲ್ಲಿ ನಿರ್ಮಿಸಲಾಗುತ್ತಿತ್ತು. ಷಾಂಪೇನ್ ವಿಭಾಗದ ನೆಲೆಗಳಲ್ಲಿ ಮೆಡಿಟರೇನಿಯನ್ ವಿಧಾನದ ಉಬ್ಬು ಶಿಲ್ಪಗಳನ್ನು ಸಮಾಧಿ ಗುಹೆಗಳ ಗೋಡೆಗಳ ಮೇಲೆ ಕೊರೆದಿರಲಾಗುತ್ತಿತ್ತು. ಬ್ರಿಟನಿಯ ಬೃಹಚ್ಛಿಲಾ ಸಮಾಧಿ ಕಟ್ಟಡಗಳ ಮೇಲೆ ವಿವಿಧ ಪ್ರಾಣಿಗಳ ಮಾನವಾಕೃತಿಗಳನ್ನು ಕೊರೆಯಲಾಗಿದೆ. ಕಬ್ಬಿಣಯುಗದಲ್ಲಿ ಪೂರ್ವ ಯೂರೋಪಿನಿಂದ ಪ್ರಸಾರವಾದ ಅರ್ನ್‍ಫೀಲ್ಡ್ ಸಂಸ್ಕøತಿಯೊಂದಿಗೆ ಪೂರ್ವ, ಮಧ್ಯ ಮತ್ತು ದಕ್ಷಿಣ ಫ್ರಾನ್ಸಿನಲ್ಲಿ ಹೊಸ ಕಲಾ ಸಂಪ್ರದಾಯ ತಲೆದೋರಿತಾದರೂ ಅದರ ವೈಶಿಷ್ಟ್ಯವೇನೂ ಕಾಣಬರುವುದಿಲ್ಲ.

	ಕ್ರಿ.ಪೂ. 500ರಿಂದ ಈಚೆಗೆ ಗ್ರೀಕ್ ಮತ್ತು ಕೆಲ್ಟಿಕ್ ಯುಗಗಳಲ್ಲಿ ಆಯಾ ಕಲಾ ಸಂಪ್ರದಾಯಗಳ ಕೆಲವು ವಸ್ತುಗಳೂ ಕಾಣಬರುತ್ತವೆ. ಗ್ರೀಕರು ನಾಗರಿಕ ವಾಸ್ತುಶಿಲ್ಪ ಪದ್ಧತಿಯನ್ನು ಪ್ರಾರಂಭಿಸಿದರು. ಮಾರ್ಸೇಲ್ಸ್ ನಗರ ಅವರ ಪ್ರಭಾವದಿಂದ ಹುಟ್ಟಿಕೊಂಡಿತು. ಚೌಕಾಕಾರದಲ್ಲಿ ಕಡೆದ ಕಲ್ಲುಗಳಿಂದ ಸಿಮೆಂಟಿಲ್ಲದೆ ಕಟ್ಟಡಗಳನ್ನು ನಿರ್ಮಿಸಲಾಗುತ್ತಿತ್ತು. ಐಯೋನಿಕ್ ಪದ್ಧತಿಯ ವಾಸ್ತು ಅವಶೇಷಗಳು ಅಲ್ಲಿ ಸಿಕ್ಕಿವೆ. ಅನಂತರ ಕಾಲದ ರಕ್ಷಣಾ ಕೋಟೆಗಳ ಅವಶೇಷಗಳು ಸಹ ಸೇಂಟ್ ಬ್ಲೇಸ್ ಎಂಬಲ್ಲಿ ಇವೆ. ಐಯೋನಿಕ್ ಶೈಲಿಯ ಮೂರ್ತಿಗಳೂ ಆ ಪ್ರದೇಶದಲ್ಲಿ ಸಿಕ್ಕಿವೆ. ಗ್ರೀಕ್ ಶೈಲಿಯ ಚಿತ್ರಣಗಳು ಕಂಡುಬಂದಿವೆ. ಹೆಲೆನಿಕ್ ಯುಗದ ಪ್ರಭಾವಗಳು ಕೆಲಮಟ್ಟಿಗೆ ಕಂಡುಬಂದಿರುವುದರಿಂದ ಗ್ರೀಕ್ ಗಾಲ್ ಶೈಲಿಯೆಂದು ಹಲವರು ಹೇಳಿದ್ದಾರೆ. ರೋಕೆಪಟ್ರ್ಯೂಸನ ಪ್ರಾರ್ಥನಾ ಮಂದಿರದಲ್ಲಿರುವ ಅಲಂಕಾರಿಕ ಶಿಲ್ಪಗಳು ಚಾರಿತ್ರಿಕ ಯುಗದ ಪ್ರಾಚೀನತಮ ನಿದರ್ಶನಗಳು. ಇವು ಮೆಡಿಟರೇನಿಯನ್ ಕಲೆಯ ಪ್ರಭಾವವಿದ್ದರೂ ತಮ್ಮದೇ ಆದ ಶೈಲಿಯನ್ನು ಅವು ಪ್ರದರ್ಶಿಸುತ್ತವೆ. ಗ್ರೀಕ್ ಮತ್ತು ಇಟಾಲಿಯನ್ ಶಿಲ್ಪ ಲಕ್ಷಣಗಳೊಂದಿಗೆ ಸ್ಥಳೀಯ ಲಕ್ಷಣಗಳನ್ನು ತೋರುವ ಕುದುರೆ, ನರಭಕ್ಷಕ ದುಷ್ಟ ಪ್ರಾಣಿಗಳು, ಕುದುರೆಸವಾರರು ಮುಂತಾದವು ಈ ಯುಗದ ಗಮನಾರ್ಹ ಶಿಲ್ಪಗಳು.

	ಫ್ರಾನ್ಸಿನ ಉಳಿದ ಭಾಗಗಳಲ್ಲಿ ಕಬ್ಬಿಣ ಯುಗದ ಹಾಲಸ್ಟಾಟ್ ಸಂಸ್ಕøತಿಯಿಂದ ಪ್ರಭಾವಿತವಾದ ಗಾಲ್ ಕಲಾಶೈಲಿ ರೂಢಿಯಲ್ಲಿದ್ದು ಕ್ರಮೇಣ ಲ್ಯಾಟಿನ್ ಸಂಸ್ಕøತಿಯ ಕಾಲದ ಲಕ್ಷಣಗಳನ್ನು ಪಡೆದಿವೆ. ವಕ್ರರೇಖೆಗಳ ಮೂಲಕ ಚಿತ್ರಗಳಲ್ಲಿ ಚಲನಾತ್ಮಕ ಶಕ್ತಿಯನ್ನು ಆಗಿನ ಕಲಾವಸ್ತುಗಳ ಮೇಲೆ ನಿರೂಪಿಸಲಾಗಿದೆ. ಈ ಕಲೆಯಲ್ಲಿ ಕೆಲ್ಟಿಕ್ ಶೈಲಿ ಪ್ರಮುಖವಾಗಿ ಕಾಣುತ್ತದೆ.

	ರೋಮನ್ ಆಕ್ರಮಣದ ಅನಂತರ ಈ ಪ್ರದೇಶದಲ್ಲಿ ಹೊಸ ಪ್ರಭಾವಗಳು ತಲೆದೋರಿದುವು. ಸೀಸರನ ಕಾಲದಲ್ಲಿ ಅನೇಕ ಹೊಸ ನಗರಗಳು ಸ್ಥಾಪಿತವಾದುವು. ಅವುಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಭವ್ಯಕಟ್ಟಡಗಳು ನಿರ್ಮಿತವಾದುವು. ಕ್ರಿಸ್ತಶಕದ ಮೊದಲ ಕೆಲವು ಶತಮಾನಗಳಲ್ಲಿ ಪದೇ ಪದೇ ಧಾಳಿಗಳಿಗೊಳಗಾಗಿ ಆ ಕಟ್ಟಡಗಳು ಹಾಳಾದರೂ ಆಗಿನ ಅವಶೇಷಗಳಿಂದ ಅವುಗಳ ಭವ್ಯತೆಯನ್ನು ಮತ್ತೆ ರಚಿಸುವುದು ಸಾಧ್ಯ. ರೋಮನ್ ಗಾಲ್ ರಾಜ್ಯದ ಮುಖ್ಯ ನಗರವಾದ ಟ್ರೆಯರಿನಲ್ಲಿ ಹಲವು ಕೋಟೆ ಕೊತ್ತಲಗಳು ಮತ್ತು ಸಾರ್ವಜನಿಕ ಮಂದಿರಗಳು ಆಗಿನ ವಾಸ್ತುಶಿಲ್ಪದ ಪರಿಚಯ ನೀಡುತ್ತವೆ. ಆದಿಕಾಲದ ಚರ್ಚುಗಳು ಮತ್ತು ಪ್ರಾರ್ಥನಾಮಂದಿರಗಳು ಬಹಳವಾಗಿ ನಾಶಗೊಂಡಿವೆ. ಆಗಸ್ಟಸ್ ಯುಗದ ಯುವಕ ರಾಜಕುಮಾರರ ದೇಗುಲಗಳು ಆ ಕಾಲದ ವಾಸ್ತುಶಿಲ್ಪದ ಉತ್ತಮ ನಿದರ್ಶನ. ಆಗ ವಿಜಯ ಸೂಚಕ ನಿರ್ಮಾಣಗಳೂ ಹುಟ್ಟಿಕೊಂಡುವು. ಆ ಎರಡು ಮಂದಿರಗಳಲ್ಲಿ ರೋಮನ್ ಕಮಾನುಗಳು ಮತ್ತು ಅವುಗಳಲ್ಲಿರುವ ವಿಗ್ರಹಗಳು ಗಮನಾರ್ಹ. ಇವೂ ಸಾರ್ವಜನಿಕ ರಂಗಮಂದಿರಗಳೂ ನಿರ್ಮಾಣವಾಗತೊಡಗಿದ್ದವು. ಅಬುನ್ ಗಾಲ್ ರಾಜ್ಯದ ದೊಡ್ಡ ರಂಗಮಂದಿರವಾಗಿತ್ತು. ಆಲ್ರ್ಸ್ ಲೈಯನ್ಸ್, ವಿಯೆನ್ನ ಇವು ಇತರ ಪ್ರಮುಖ ರಂಗಮಂದಿರಗಳು. ಪ್ಲಾಂಡಿಯಸ್ ಚಕ್ರವರ್ತಿಯ ಕಾಲದಲ್ಲಿ ಹಿಂದಿನ ಮಾದರಿಯ ಕಟ್ಟಡ ನಿರ್ಮಾಣ ಮುಂದುವರಿದರೂ ಅವುಗಳೊಂದಿಗೆ ಹೊಸ ಕಟ್ಟಡಗಳನ್ನು ಸೇರಿಸಲಾಗುತ್ತಿತ್ತು. ಆ ಕಾಲದಲ್ಲಿ ದೇವಾಲಯ ರಂಗಮಂದಿರ ಮತ್ತು ಶಿಲ್ಪಗಳಿಂದ ಅಲಂಕೃತವಾದ ಸ್ತಂಭಗಳು ಗಾಲೋ ರೋಮನ್ ಶೈಲಿಯನ್ನು ಎತ್ತಿತೋರಿಸುವ ನಿರ್ಮಾಣಗಳಾದವು. ರೋಮನ್ ಶೈಲಿಯ ದೇವಾಲಯಗಳಿಗೂ ಇವಕ್ಕೂ ನಡುವೆ ಇರುವ ಪ್ರಮುಖ ವ್ಯತ್ಯಾಸವೆಂದರೆ, ರೋಮನ್ ಮಂದಿರಗಳಲ್ಲಿ ಚೌಕವಾದ ವೃತ್ತಾಕಾರದ ಆರು ಎಂಟು ಕೋನಗಳ ಅಥವಾ ಶಿಲುಬೆಯಾಕಾರದ ವಿನ್ಯಾಸವಿರುತ್ತಿತ್ತು. ನಗರಮಧ್ಯದಲ್ಲಿ ಎತ್ತರ ಪ್ರದೇಶದಲ್ಲಿ ಅವನ್ನು ಕಟ್ಟಲಾಗುತ್ತಿತ್ತು. ಅವುಗಳ ಸುತ್ತ ಹಲವು ಪ್ರಾಕಾರಗಳಿರುತ್ತಿದ್ದುವು. ಗರ್ಭಗುಡಿಯ ಸುತ್ತಪ್ರದಕ್ಷಿಣಾ ಪಥ ಇರುತ್ತಿತ್ತು. ಆದರೆ ಗಾಲ್ ಪ್ರಾಂತ್ಯದಲ್ಲಿ ಈ ದೇವಾಲಯಗಳು ಸಾರ್ವಜನಿಕ ರಂಗಮಂದಿರದ ವಿನ್ಯಾಸದಲ್ಲಿರುತ್ತಿದ್ದುವು. ಅವನ್ನು ರಂಗಮಂದಿರಗಳಾಗಿಯೂ ಬಳಸಲಾಗುತ್ತಿತ್ತು. ಗರ್ಭಗುಡಿಯ ಮುಂಭಾಗದಲ್ಲಿ ಅರ್ಧವೃತ್ತಾಕಾರದ ತೆರೆದ ಪ್ರಾಂಗಣವಿದ್ದು, ಎದುರುಗಡೆ ವೇದಿಕೆಯಿರುತ್ತಿತ್ತು. ಇಂಥ ದೇವಾಲಯ-ರಂಗಮಂದಿರಗಳ ಭಗ್ನಾವಶೇಷಗಳು ಪ್ಯಾರಿಸ್ ನಗರದಲ್ಲಿವೆ. ಶಿಲ್ಪಾಲಂಕೃತ ಸ್ಮಾರಕ ಸ್ತಂಭಗಳು ಗಾಲ್ ಪ್ರಾಂತ್ಯದಲ್ಲಿ ಜನಪ್ರಿಯವಾಗಿದ್ದುವು. 4ನೆಯ ಶತಮಾನದಿಂದ ಕ್ರೈಸ್ತ ಧಾರ್ಮಿಕ ನಿರ್ಮಾಣಗಳು ತಲೆದೋರಿದುವು, ಆದರೆ ಅವು ಬಹುತೇಕ ಕಣ್ಮರೆಯಾಗಿವೆ. ಇಂಥ ಕಟ್ಟಡಗಳಲ್ಲಿ ಕಲ್ಲಿನೊಂದಿಗೆ ಸಮಸಮವಾಗಿ ಸುಟ್ಟ ಇಟ್ಟಿಗೆಗಳನ್ನು ಬಳಸಲಾಗಿತ್ತು. ಆಗಿನ ಕೆಲವು ಶ್ರೀಮಂತರ ಸೌಧಗಳಲ್ಲಿ ಹೆಚ್ಚಿನ ವೈಭವ ಕಾಣಬರುತ್ತಿತ್ತು. ಅಂಥ ಕೆಲವು ನಿದರ್ಶನಗಳನ್ನು ಡಾರ್ಡಾನ್ ಮತ್ತು ಹ್ಯಾಟ್ ಗ್ಯಾರೋನ್ ಪ್ರಾಂತ್ಯಗಳಲ್ಲಿ ಈಗಲೂ ಕಾಣಬಹುದು. 5-6ನೆಯ ಶತಮಾನಗಳಲ್ಲಿ ಕಟ್ಟಿದ ಕೆಲವು ಕ್ರೈಸ್ತ ಕಟ್ಟಡಗಳ ಅವಶೇಷಗಳು ನಗರಗಳ ಹೊರ ಭಾಗದಲ್ಲಿ ಉಳಿದುಬಂದಿವೆ.

	ಮಧ್ಯಯುಗದ ಪ್ರಾರಂಭಕಾಲದ ಕ್ರೈಸ್ತ ಕಟ್ಟಡಗಳು ಬಹುತೇಕ ನಾಶವಾಗಿದ್ದರೂ ಲೈಯನ್ಸ್, ಮಾರ್ಸೇಲ್ಸ್ ಮುಂತಾದ ಪ್ರಾಂತ್ಯಗಳಲ್ಲಿ ಸ್ವಲ್ಪ ಮಟ್ಟಿಗೆ ಅವು ಉಳಿದು ಬಂದಿವೆ. ದಕ್ಷಿಣದಲ್ಲಿ ಆ ಕಾಲದ ಹಲವಾರು ಮೂರ್ತಿಶಿಲ್ಪಗಳು ಉಳಿದಿವೆ. ಅವುಗಳ ಪೈಕಿ ಅರ್ಲೆಸನ ಶವತೊಟ್ಟಿಗಳು ಮತ್ತು ಬೋದಿಗೆಗಳು ಗಮನಾರ್ಹ. ಅವುಗಳ ಮೇಲೆ ರೇಖಾವಿನ್ಯಾಸ ಮತ್ತು ಪ್ರಾಣಿ ಚಿತ್ರಗಳನ್ನು ಬಿಡಿಸಲಾಗಿತ್ತು. ಅವು ಹೆಚ್ಚಾಗಿ ಸಮಾಧಿಗಳಲ್ಲಿ ದೊರಕಿವೆ.

	ಅನಂತರ ಮೊರೊವಿಂಜಿಯನ್ ವಂಶದ ಆಳ್ವಿಕೆಯಲ್ಲಿ (8ನೆಯ ಶತಮಾನ) ಮತ್ತೆ ಕಲಾಭಿರುಚಿ ಬೆಳೆಯಿತು. ಷಾರ್ಲ್‍ಮೇನ್ ಚಕ್ರವರ್ತಿಯ ಆಶ್ರಯದಲ್ಲಿ ಮತೀಯ ಕಟ್ಟಡಗಳು ಪ್ರಾಧಾನ್ಯ ಪಡೆದುವು. ಅಂಥ ಮತೀಯ ನಿರ್ಮಾಣಗಳ ಎರಡು ಪಾಶ್ರ್ವಗಳಲ್ಲಿ ಹೊಸ ಭಾಗಗಳನ್ನು ಸೇರಿಸಿ ಅವನ್ನು ವಿಸ್ತರಿಸಲಾಯಿತು. ಆದರೆ ಅವುಗಳ ನಿರ್ಮಾಣ ಉತ್ತಮ ಮಟ್ಟದ್ದಾಗಿರಲಿಲ್ಲ. ಆ ಕಟ್ಟಡಗಳ ಪೈಕಿ ಲೊಯಿರೆಯ ಜರ್ಮಿನಿ-ಡೆ-ಪ್ರೆ ವೈಶಿಷ್ಟ್ಯಪೂರ್ಣವಾದ್ದು. ಅದರ ರಚನಾ ವಿನ್ಯಾಸ, ಶಬಲ ಖಚಿತ ಚಿತ್ರ ಮತ್ತು ಗಾರೆಯ ಶಿಲ್ಪಾಲಂಕರಣದ ಪುಷ್ಕಳತೆ ಗಮನಾರ್ಹ. ಆಗಿನ ಮೂರ್ತಿಶಿಲ್ಪಕಲೆ ಒರಟಾಗಿದ್ದು ಕೇವಲ ಅಲಂಕರಣಕ್ಕಾಗಿ ಬಳಕೆಯಲ್ಲಿತ್ತು. ಗೋಡೆಯ ಹೊರಭಾಗದಲ್ಲಿ ಕಲ್ಲಿನಲ್ಲಿ ಕೆತ್ತಿದ ರೇಖಾವಿನ್ಯಾಸಗಳು, ಒಳಭಾಗದಲ್ಲಿ ಭಿತ್ತಿಚಿತ್ರಗಳು, ಪ್ರಮುಖ ಅಲಂಕರಣ ಮಾಧ್ಯಮಗಳಾಗಿದ್ದುವು. ಆ ಯುಗದಲ್ಲಿ ಸಣ್ಣ ಕಲಾವಸ್ತುಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲಾಯಿತು. ನಾರ್ಮನರ ದಾಳಿಗಳ ದೆಸೆಯಿಂದ 9ನೆಯ ಶತಮಾನದಲ್ಲಿ ಈ ಕಲಾಸಂಪತ್ತು ಬಹಳ ಮಟ್ಟಿಗೆ ನಾಶವಾಯಿತು. ರೋನ್ ಕಣಿವೆಯ ಬರ್ಗಂಡಿ, ಆಲ್ಪೈನ್ ಪ್ರದೇಶ, ಪೂರ್ವ ಪಿರೆನೀಸ್ ಮುಂತಾದ ಪ್ರಾಂತಗಳಲ್ಲಿ 10ನೆಯ ಶತಮಾನದಲ್ಲಿ ಪ್ರಾರಂಭವಾದ ಶಾಶ್ವತಸ್ಮಾರಕಗಳ ಕಲೆ ಸಮೃದ್ಧವಾಗಿ ಬೆಳೆದು ಯೂರೋಪಿನ ಹಲವು ಭಾಗಗಳಿಗೆ ಪ್ರಸರಿಸಿತು. ಈ ಬೆಳವಣಿಗೆಯನ್ನು ರೋಮನೆಸ್ಕ್ ಶೈಲಿಯೆಂದು ಕರೆಯಲಾಗಿದೆ.

	ರೋಮನೆಸ್ಕ್: 11ನೆಯ ಶತಮಾನದಲ್ಲಿ ಮತೀಯ ವಾಸ್ತುಶಿಲ್ಪ ಹೊಸತಿರುವು ಪಡೆಯಿತು. ಕಟ್ಟಡಗಳ ವಿಸ್ತಾರ ಮತ್ತು ಎತ್ತರ ಹೆಚ್ಚಿತು. ಹಿಂದಿನ ಬೆಸಿಲಿಕಗಳಲ್ಲಿ ಇಕ್ಕೆಲದ ಹಜಾರಗಳಿದ್ದ ಕಟ್ಟಡ ವಿನ್ಯಾಸವನ್ನು ಅನುಸರಿಸಿದರೂ ಅದರ ಪೂರ್ವಭಾಗದಲ್ಲಿ ಕೆಲವು ಹೊಸ ಅಂಶಗಳನ್ನು ಸೇರಿಸಲಾಯಿತು. ಆ ಕಾಲದ ಬೃಹದಾಕಾರದ ಚರ್ಚು ಮತ್ತು ಕೋಟೆಗಳ ಭಾರಿ ಗೋಡೆಗಳು ರಕ್ಷಣಾವಶ್ಯಕತೆಯನ್ನು ಸೂಚಿಸುತ್ತವೆ; ವಿಶಾಲವಾದ ಕೋಟೆಯ ಮಹಾದ್ವಾರ ಮತ್ತು ಭಿತ್ತಿ ವರ್ಣಚಿತ್ರಗಳು ಆ ಕಾಲದ ಮತೀಯ ಸಾಹಿತ್ಯದಲ್ಲಿ ವರ್ಣಿತವಾದ ಪ್ರಲಯ ಕಾಲದ ಸೂಚಕಗಳಾಗಿದ್ದವು. ಆಗ ಪ್ರಬಲವಾಗಿದ್ದ ಊಳಿಗಮಾನ್ಯ ಪದ್ಧತಿ ಮತ್ತು ಸಂನ್ಯಾಸಿಮಠ ಪದ್ಧತಿಗಳು ರೋಮನೆಸ್ಕ್ ಶೈಲಿಯ ಉಗಮಕ್ಕೆ ಪ್ರಮುಖ ಕಾರಣಗಳು. ರಾಜಾನುಗ್ರಹದಿಂದ ಹೆಚ್ಚು ಭೂಸ್ವಾಮ್ಯಗಳನ್ನು ಹೊಂದಿದ್ದ ಶ್ರೀಮಂತ ವರ್ಗ ಕ್ರಮೇಣ ದುಡಿಮೆಗಾರರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದುದಲ್ಲದೆ, ರಾಜರ ಅಧಿಕಾರವನ್ನು ನಿರ್ಲಕ್ಷಿಸುವಂತೆ ಆಯಿತು. ಶ್ರೀಮಂತರು ಮತ್ತು ಸಂಪತ್ತನ್ನೂ ಅಧಿಕಾರ ಪ್ರಾಬಲ್ಯವನ್ನೂ ಮೆರೆಸಲು ಪರಿಣಾಮಕಾರಿ ಸ್ಮಾರಕಗಳನ್ನು ರಚಿಸಲಾರಂಭಿಸಿದರು. ಶ್ರೀಮಂತರಷ್ಟೇ ಅಧಿಕಾರ ಮತ್ತು ಸಂಪತ್ತು ಗಳಿಸಿದ್ದ ಧಾರ್ಮಿಕ ನಾಯಕರೂ ತಮ್ಮ ವೈಭವ ಪ್ರದರ್ಶನದಲ್ಲಿ ಹಿಂದೆ ಬೀಳಲಿಲ್ಲ. ಗಮನಾರ್ಹವೂ ವೈಭವೋಪೇತವೂ ಆದ ಚರ್ಚುಗಳು ಸಂನ್ಯಾಸಿಮಠಗಳು ಮುಂತಾದ ಭವ್ಯ ಸ್ಮಾರಕಗಳನ್ನು ಅವರು ನಿರ್ಮಿಸಲಾರಂಭಿಸಿದರು. ರಾಜಕೀಯವಾಗಿ ಇವು ಕ್ಷೋಭೆಗೆ ಕಾರಣವಾದರೂ ಕಲೆಯ ದೃಷ್ಟಿಯಿಂದ ಸ್ವಾಗತಾರ್ಹ. ಕ್ರಿಶ್ಚಿಯನ್ ಇಸ್ಲಾಮಿ ಪಂಗಡಗಳ ನಡುವಣ ಧರ್ಮಯುದ್ಧಗಳು ಈ ಪರಿಸ್ಥಿತಿಗೆ ಪ್ರೇರಕವಾದುವು.

	ಈ ಕಟ್ಟಡಗಳ ಒಳಭಾಗದಲ್ಲಿ ಸಾಕಷ್ಟು ಸ್ಥಳ ಮತ್ತು ಚಲನೆ, ಸಾಕಷ್ಟು ಗಾಳಿಬೆಳಕುಗಳನ್ನು ಒದಗಿಸುವುದು ಕಟ್ಟಡಗಳನ್ನು ಬೆಂಕಿಯ ಅನಾಹುತದಿಂದ ರಕ್ಷಿಸುವುದು ಇವು ರೋಮನಸ್ಕ್ ವಾಸ್ತುಶಿಲ್ಪಿಗಳಿಗೆ ಪ್ರಮುಖ ಸಮಸ್ಯೆಗಳಾದುವು. ಸ್ಥಳ ವೈಶಾಲ್ಯಕ್ಕಾಗಿ ಮುಂಭಾಗದ ಹಜಾರವನ್ನು ಅವಲಂಬಿಸಿರುವುದರಿಂದ ಪಾಶ್ರ್ವದ ಅಂಕಣಗಳನ್ನು ದ್ವಿಗುಣಗೊಳಿಸುವುದರಿಂದ ಮತ್ತು ಮೇಲಂತಸ್ತುಗಳನ್ನು ಒದಗಿಸುವ ಮೂಲಕ ಇವನ್ನು ಪರಿಹರಿಸಲಾಯಿತು. ಸುತ್ತಂಕಣಗಳನ್ನು ವಿಸ್ತರಿಸುವುದು ಮತ್ತು ಪ್ರದಕ್ಷಿಣ ಪಥವನ್ನು ಒದಗಿಸುವ ಮೂಲಕ ಮತ್ತು ವೇದಿಕೆಯ ಸುತ್ತಲ ಆಲಯಗಳ ನಿರ್ಮಾಣ ಇವುಗಳಿಂದ ಯಾತ್ರಾರ್ಥಿಗಳ ಚಲನೆಗೆ ಅವಕಾಶವನ್ನು ಮಾಡಿಕೊಡಲಾಯಿತು. ಬೆಂಕಿ ಅನಾಹುತಗಳನ್ನು ತಪ್ಪಿಸಲು ಮರದ ಗುಮ್ಮಟಗಳಿಗೆ ಬದಲು ಕಲ್ಲಿನ ಗುಮ್ಮಟಗಳನ್ನು ಕಟ್ಟಲಾಯಿತು. ಅವುಗಳ ಭಾರನಿರ್ವಹಣೆಗಾಗಿ ಘನವಾದ ದಪ್ಪ ಕಲ್ಲಿನ ಗೋಡೆಗಳನ್ನು ನಿರ್ಮಿಸಲಾಯಿತು. ವೃತ್ತ ಅಥವಾ ಅರ್ಧವೃತ್ತಾಕಾರದ ಕಮಾನುಗಳು ಈ ಶೈಲಿಯ ಕಟ್ಟಡಗಳ ಪ್ರಮುಖ ಲಕ್ಷಣಗಳಲ್ಲೊಂದು. ಇಂಥ ಕಟ್ಟಡವನ್ನು ನೆವಸ್‍ನಲ್ಲಿರುವ ಸೆಂಟ್ ಎಟಿಯೆನೇ ಚರ್ಚಿನಲ್ಲಿ ಕಾಣಬಹುದು. ಆದರೆ ಪ್ರಾವೆನ್ಸಿನ ನಿದರ್ಶನದಲ್ಲಿ ಚೂಪಾದ ಕಮಾನನ್ನು ಕಾಣುತ್ತೇವೆ. ಒಂದಕ್ಕೊಂದು ಸೇರಿಕೊಂಡ ಪಿಪಾಯಿಯ ಆಕಾರದ ಗುಮ್ಮಟಗಳನ್ನು ಬಳಸಿ ನಿರ್ಮಿಸಿದ ಈ ಶೈಲಿಯ ಕಟ್ಟಡವನ್ನು ವಿಜûಲೆಯಲ್ಲಿರುವ ಲಾಮೆಡಲೀನ್ ಮಂದಿರದಲ್ಲಿ ಕಾಣಬಹುದು. ಈ ಶೈಲಿಯ ಮತ್ತೊಂದು ಮುಖ್ಯ ಲಕ್ಷಣವೆಂದರೆ, ಕಟ್ಟಡದ ವಿಸ್ತಾರವನ್ನು ಹೆಚ್ಚಿಸಲು ಪ್ರತ್ಯೇಕ ಅಂಗಗಳನ್ನು ಏಕೀಕರಿಸುವುದಾಗಿತ್ತು. ಮೇಲ್ಕಟ್ಟಡದ ಭಾರದಿಂದಾಗಿ ಗೋಡೆಯಲ್ಲಿ ಅಲ್ಲಲ್ಲಿ ವಾತಾಯನಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ. ಕೆಲವು ಪ್ರದೇಶಗಳಲ್ಲಿ ಚಾವಣಿಯನ್ನು ಬೇರೆ ಬೇರೆ ಮಟ್ಟಗಳಲ್ಲಿ ನಿರ್ಮಿಸಿ ಸ್ವಲ್ಪಮಟ್ಟಿಗೆ ಈ ಸಮಸ್ಯೆಯನ್ನು ಪರಿಹರಿಸಲಾಗಿದ್ದರೂ ಈ ಕಟ್ಟಡಗಳ ಒಳಭಾಗ ಇನ್ನೂ ಕತ್ತಲಾಗಿಯೇ ಇರುತ್ತಿತ್ತು. ಈ ಕಟ್ಟಡಗಳ ಒಳಭಾಗದಲ್ಲಿದ್ದ ಪ್ರತ್ಯೇಕ ಭಾಗಳನ್ನು ಹೊರಗಿನಿಂದ ಗುರ್ತಿಸಬಹುದಾಗಿತ್ತು. ಪ್ರದಕ್ಷಿಣಾಪಥದ ಸುತ್ತಲ ಅರ್ಧಗೋಲಾಕೃತಿಯ ಗುಡಿಗಳ ಮೇಲಿನ ಗುಮ್ಮಟಗಳು ಎದ್ದು ಕಾಣುತ್ತಿದ್ದುವು. ಈ ರೋಮನೆಸ್ಕ ಶೈಲಿಯ ಪ್ರಾದೇಶಿಕ ಉಪಶೈಲಿಗಳನ್ನು ಗುರುತಿಸಲಾಗಿದೆ.

	ರೋಮನೆಸ್ಕ್ ಶೈಲಿಯಲ್ಲಿ ಹಲವು ಪ್ರಾಣಿಗಳನ್ನು ಸೇರಿಸಿದ ಮಿಶ್ರಜಾತಿಯ ವಿಕಟಶಿಲ್ಪಗಳು ಪ್ರಧಾನವಾಗಿವೆಯಾದರೂ ಅವುಗಳ ಚಲನಾತ್ಮಕ ಸತ್ತ್ವವನ್ನೂ ಆಡಂಬರವನ್ನೂ ಕಡೆಗಣಿಸುವಂತಿಲ್ಲ. ಆ ಮುನ್ನ ಅವನತಿಹೊಂದಿದ್ದ ಮೂರ್ತಿ ಶಿಲ್ಪಕಲೆ ಈ ಕಾಲದಲ್ಲಿ ಮರುಕಳಿಸಿತು. ಕಲ್ಲಿನ ಕಟ್ಟಡಗಳ ಮೇಲೆ ಉಬ್ಬುಶಿಲ್ಪಗಳನ್ನು ಕಡೆಯಲಾಗುತ್ತಿತ್ತು. ಇಂಥ ಅಲಂಕಾರನ ಶಿಲ್ಪಗಳನ್ನು ನೈಋತ್ಯ ಫ್ರಾನ್ಸಿನ ಮೊಯಿಸಾಕಿನಲ್ಲಿರುವ ಚರ್ಚಿನ ಮುಂದಿನ ಹೆಬ್ಬಾಗಿಲ ಮೇಲೆ ಕಾಣಬಹುದು. ಮಂದಿರಗಳ ಒಳಭಾಗದಲ್ಲಿ ಇಂಥ ಕೆತ್ತನೆಗಳನ್ನು ಕಂಬಗಳ ಮೇಲಿನ ಬೋದಿಗೆಗಳಲ್ಲಿ ಅಥವಾ ವೇದಿಕೆಗಳ ಮೇಲೆ ಕಾಣಬಹುದು. ಬೋದಿಗೆಗಳು ಸಹ ಉತ್ತಮ ಕಲಾಕೃತಿಗಳಾಗಿದ್ದುವೆನ್ನಬಹುದು. ಚಾವಣಿಯ ಭಾರವನ್ನು ಕಂಬಗಳಿಗೆ ವರ್ಗಾಯಿಸುವ ಉದ್ದೇಶದೊಂದಿಗೆ ಆಯಾಕಾರದ ಚಾವಣಿಯಿಂದ ವರ್ತುಲಾಕಾರದ ಕಂಬಕ್ಕೆ ಕ್ರಮೇಣ ಉಂಟಾಗುವ ಪರಿವರ್ತನೆಗೆ ಈ ಬೋದಿಗೆ ಮಧ್ಯಸ್ಥವಾಗುತ್ತದೆ; ಅವುಗಳ ಮೇಲಿನ ಕೆತ್ತನೆ ಕೆಲಸವೂ ಈ ಪರಿವರ್ತನೆಗೆ ನೆರವಾಗುತ್ತದೆ. ರೋಮನೆಸ್ಕ್ ಶೈಲಿಯ ಕಂಬಗಳು ಈ ದೃಷ್ಟಿಯಿಂದ ವಿಶಿಷ್ಟವಾದವು. ಇದಕ್ಕೆ ಉತ್ತಮ ನಿದರ್ಶನಗಳನ್ನು 12 ನೆಯ ಶತಮಾನದ ಮೊಯಿಸಾಕ್ ಪ್ರಾರ್ಥನಾ ಮಂದಿರಲ್ಲಿ ಕಾಣಬಹುದು.

	ಚರ್ಚುಗಳ ಗೋಡೆಗಳ ಮೇಲೆ ವರ್ಣರಂಜಿತ ಚಿತ್ರಗಳನ್ನು ಬಿಡಿಸಲಾಗುತ್ತಿತ್ತು ಮತ್ತು ಧರ್ಮಗ್ರಂಥಗಳ ಹಸ್ತಪ್ರತಿಗಳ ಮೇಲೂ ವರ್ಣಚಿತ್ರಗಳನ್ನು ಮೂಡಿಸುತ್ತಿದ್ದುದನ್ನು ಕಾಣಬಹುದಾಗಿದೆ.

	ರೋಮನೆಸ್ಕ್ ಕಲಾಸಂಪ್ರದಾಯ ಅವ್ಯವಸ್ಥಿತ ಸಮಾಜದಲ್ಲಿ ಪಶ್ಚಿಮ ಯೂರೋಪನ್ನು ಒಂದುಗೂಡಿಸಬಲ್ಲದ್ದಾಗಿದ್ದ ಸಾಂಸ್ಕøತಿಕ ಲಕ್ಷಣವಾಗಿತ್ತು.
	ಗಾತಿಕ್ ಶೈಲಿ: 1140-1400 ಸುವ್ಯವಸ್ಥಿತವಾದ ಮತ್ತು ಸಮಾನಾವಕಾಶಗಳನ್ನು ಪ್ರತಿಬಿಂಬಿಸುವ ಸಮಾಜದ ಒಂದು ಅಂಗವಾಗಿ ಈ ಶೈಲಿ ಬೆಳೆದುಬಂದಿತು. ಅರಸೊತ್ತಿಗೆ ತನ್ನ ಅಧಿಕಾರವನ್ನು ಪುನಃ ಸ್ಥಾಪಿಸಿದ ಅನಂತರ ಶ್ರೀಮಂತರ ಪ್ರಾಬಲ್ಯ ಕೊನೆಗೊಂಡಾಗ ಸಾಮಾನ್ಯ ಪ್ರಜೆಗಳಲ್ಲಿ ಆತ್ಮವಿಶ್ವಾಸ ಮೂಡಿತು. ಇದರ ದ್ಯೋತಕವಾಗಿ ಕಲಾಸಂಪ್ರದಾಯದಲ್ಲೂ ಒಂದು ಸಮತಾಭಾವವನ್ನು ಸೂಸುವ ಶೈಲಿ ಹುಟ್ಟಿಕೊಂಡಿತು. ಈ ಶೈಲಿಯಲ್ಲಿ ಸ್ತ್ರೀ ಪ್ರಧಾನವಾದ ಕಲಾವಸ್ತುಗಳಿಗೂ ತಾಯಿ ಮಗುವಿನ ಪ್ರೀತಿಗೂ ಮಹತ್ತ್ವ ದೊರಕಿತು. ಇದಕ್ಕೆ ನಿದರ್ಶನವಾಗಿ ವಿಶ್ವ ಮಾತೆಯ ಪಾತ್ರದಲ್ಲಿ ಕನ್ಯೆ ಮೇರಿ ಕಲಾವಸ್ತುವಾದಳು. ಮಧ್ಯಯುಗೀನ ಯೂರೋಪಿನಲ್ಲಿ ದೊಡ್ಡ ನಗರಗಳು ಬೆಳೆದಂತೆ ಅವುಗಳಲ್ಲಿ ಸಾರ್ವಜನಿಕರ ಆಶ್ರಯದಲ್ಲಿ ಗಾತಿಕ್ ಮಂದಿರಗಳು ನಿರ್ಮಾಣಗೊಂಡವು. ಆ ಚರ್ಚುಗಳಿಗೆ ಸೇರಿದಂತೆ ವಿದ್ಯಾಕೇಂದ್ರಗಳು, ಕ್ರೈಸ್ತ ಧರ್ಮ ಬೋಧಕ ಶಾಲೆಗಳು ಅಸ್ತಿತ್ವಕ್ಕೆ ಬಂದವು. ಕಾಲಾಂತರದಲ್ಲಿ ಈ ಬೆಳವಣಿಗೆಗಳು ಧರ್ಮವಿಶ್ಲೇಷಣೆಗೂ ಹೊಸ ತತ್ತ್ವಗಳ ಉದಯ ಮತ್ತು ಬೌದ್ಧಿಕ ಕ್ರಾಂತಿ ಪ್ರವರ್ತನೆಗೂ ನಾಂದಿಯಾದುವು. ಗಾತಿಕ್ ಶೈಲಿಯ ಕಟ್ಟಡಗಳು ರೋಮನೆಸ್ಕ್ ಶೈಲಿಯ ನಿರ್ಮಾಣಗಳಿಂದ ಪೂರ್ಣ ವಿದೃಶವಾಗಿದ್ದವು.

	ಪ್ರಾರಂಭಿಕ ಗಾತಿಕ್: 7ನೆಯ ಲೂಯಿ ದೊರೆಯ ಕಾಲದಲ್ಲಿ 1144ರಲ್ಲಿ ಜೀರ್ಣೋದ್ಧಾರಗೊಂಡ ಸೆಂಟ್ ಡೆನಿಸ್ ಚರ್ಚ್‍ನೊಂದಿಗೆ ಈ ಶೈಲಿ ಆರಂಭವಾಯಿತೆಂದು ಹೇಳಲಾಗಿದೆ. ಆ ಮೊದಲಿನ ರೋಮನೆಸ್ಕ್‍ರ ಶೈಲಿಯ ಚರ್ಚ್ ಪಾಳುಬಿದ್ದಾಗ ಅಬಟ್ (ಕ್ರೈಸ್ತಮಠಾಧಿಪತಿ) ಸುಜರ್ ಅದರ ಪ್ರಮಾಣಗಳಿಗೆ ಅನುಗುಣವಾಗಿ ಮತ್ತು ಅದರ ತಳಪಾಯದ ಮೇಲೆ ಹೊಸ ಮಂದಿರವನ್ನು ನಿರ್ಮಿಸಲಾರಂಭಿಸಿದ. ಮೊದಲ ಶೈಲಿಯಲ್ಲಿ ಬಳಕೆಯಲ್ಲಿದ್ದ ದಪ್ಪಗೋಡೆಗಳು ಕಟ್ಟಡದ ವಿವಿಧ ಅಂಕಣಗಳನ್ನು ಪ್ರತ್ಯೇಕಿಸುತ್ತಿದ್ದರೆ, ಹೊಸ ಶೈಲಿಯಲ್ಲಿ ಒಳಗೋಡೆಗಳಿಲ್ಲದಿದ್ದದರಿಂದ ಸ್ಥಳದ ಏಕತೆ ಎದ್ದು ಕಂಡಿತು. ಗೋಡೆಗಳ ಬದಲು ಕಂಬಗಳ ಮೇಲೆ ಆಧಾರಿತವಾದ ಮರದ ಅಥವಾ ಕಬ್ಬಿಣದ ತೊಲೆಗಳ ಚೌಕಟ್ಟುಗಳು ಚಾವಣಿಗಳನ್ನು ಎತ್ತಿ ಹಿಡಿದುವು. ಅಡ್ಡ ತೊಲೆಗಳ ಸಹಾಯದಿಂದ ಹಲ ರೀತಿಯ ಕಮಾನು ಗುಮ್ಮಟಗಳನ್ನು ನಿರ್ಮಿಸಲಾಯಿತು. ಇಂಥ ಹಲವಾರು ಕಮಾನುಗಳಿಂದ ಕೂಡಿದ ಗಾತಿಕ್ ಶೈಲಿಯ ಕಟ್ಟಡಗಳಲ್ಲಿ ಸೂಚಿ ಕಮಾನು ಮತ್ತು ಅರ್ಧವೃತ್ತ ಕಮಾನುಗಳ ಸಂಯೋಜಿತ ನಿದರ್ಶನಗಳನ್ನು ಕಾಣಬಹುದು.

    1145 ಮತ್ತು 1150ರ ನಡುವೆ ಕಟ್ಟಲಾರಂಭಿಸಿದ ನೊಯೊನ್ ಪ್ರಾರ್ಥನಾಮಂದಿರದಲ್ಲಿ ಸೆಂಟ್ ಡೆನಿಸ್ ಮಂದಿರದ ಪ್ರಭಾವವನ್ನು ಕಾಣಬಹುದಾದರೂ ಇಲ್ಲಿ ಹಲವು ವ್ಯತ್ಯಾಸಗಳನ್ನು ಗಮನಿಸಬಹುದು; ಗಾತಿಕ್ ಶೈಲಿಯ ಲಕ್ಷಣಗಳಲ್ಲೊಂದಾದ, ಒಳಭಾಗದಲ್ಲಿ ನಾಲ್ಕು ಅಂತಸ್ತುಗಳ ವಿನ್ಯಾಸ ರೂಢಿಗೆ ಬಂತು. ಮಧ್ಯ ಹಜಾರ ಮತ್ತು ಪಕ್ಕದ ಅಂಕಣಗಳ ನಡುವಣ ಕಮಾನುದ್ವಾರಗಳು, ಪಕ್ಕದ ಅಂಕಣಗಳಷ್ಟು ವಿಸ್ತಾರವಾದ ಮೊಗಸಾಲೆ ಅಥವಾ ಟ್ರಬ್ಯೂನ್, ಅದರ ಮೇಲಿನ ದಪ್ಪ ಗೋಡೆಯಲ್ಲಿಯ ಉಪ್ಪರಿಗೆ ಪೀಠಪಂಕ್ತಿ ಮತ್ತು ಗುಮ್ಮಟಗಳ ಕೆಳಗಿನ ಕಿಟಕಿಗಳ ಸಾಲುಗಳನ್ನು ಈ ನಾಲ್ಕು ಅಂತಸ್ತುಗಳನ್ನು ಪ್ರತಿನಿಧಿಸುತ್ತಿದ್ದು ಮಧ್ಯಹಜಾರದಿಂದ ಅವೆಲ್ಲವನ್ನೂ ಕಾಣಬಹುದಾಗಿತ್ತು.

	ಕಟ್ಟಡದ ಹೊರನೋಟದಲ್ಲೂ ಹಲವು ಬದಲಾವಣೆಗಳಾದುವು, ದ್ವಾರದ ಮೇಲೆ ರಕ್ಷಣಾತ್ಮಕವಾದ ಮುಖಮಂಟಪ ಮತ್ತು ಅದರ ಮೇಲಿನ ಗೋಪುರವನ್ನು ಮುಖ್ಯ ಕಟ್ಟಡದೊಂದಿಗೆ ಹೊಂದಿಸಲಾಗುತ್ತಿತ್ತು. ಒಳಭಾಗದ ನಾಲ್ಕು ಅಂತಸ್ತುಗಳ ಸ್ಥೂಲ ರೇಖೆಗಳು ಹೊರನೋಟಕ್ಕೆ ಕಾಣುವಂತೆ ಮಾಡಲಾಗುತ್ತಿತ್ತು. ಅಂತೆಯೇ ಹೊರಬಾಗಿಲು ಕಿಟಿಕಿ, ಗೋಡೆ ಮತ್ತು ಗೋಪುರಗಳ ಮೇಲೆ ಆಳವಾದ ಕೆತ್ತನೆಗಳನ್ನೂ ಶಿಲ್ಪಗಳನ್ನು ರೂಪಿಸಲಾಗುತ್ತಿತ್ತು. ಲಾವುನ್‍ನಲ್ಲಿರುವ ನಾಟರ್‍ಡೇಮ್ ಮಂದಿರದಲ್ಲಿ ಈ ಎಲ್ಲ ಲಕ್ಷಣಗಳೊಂದಿಗೆ ಕಟ್ಟಡದ ಅಂಚುಗಳಲ್ಲಿ ನಿರ್ಮಿಸಿದ ಎತ್ತರವಾದ ಗೋಪುರಗಳನ್ನೂ ಕಾಣಬಹುದಾಗಿದೆ.

	ಉನ್ನತ ಗಾತಿಕ್: 1187ರ ಅಕ್ಟೋಬರಿನಲ್ಲಿ ಜೆರೂಸಲೇಮನ್ನು ಸಾಲಾದೀನ್ ವಶಪಡಿಸಿಕೊಂಡ ತರುವಾಯ ಯೂರೋಪಿನಲ್ಲಿ ಉಂಟಾದ ಧಾರ್ಮಿಕ ಪುನರುತ್ಥಾನಯುಗದಲ್ಲಿ ಗಾತಿಕ್ ವಾಸ್ತು ನಿರ್ಮಾಣಗಳು ಪ್ರಾಧಾನ್ಯ ಪಡೆದುವು. ಈ ಕಾಲವನ್ನು ಕತೀಡ್ರಲುಗಳ ಯುಗವೆಂದು ಕರೆಯಲಾಗಿದೆ.

	ಚಾರ್ಟರ್ಸ್‍ನಲ್ಲಿಯ ಪ್ರಾರ್ಥನಾಮಂದಿರ 1194ರ ಜೂನಿನಲ್ಲಿ ಅಗ್ನಿಗೆ ಆಹುತಿಯಾದ ಮೇಲೆ ಪ್ರಾರಂಭಿಸಲಾದ ಹೊಸ ಮಂದಿರ ನಿರ್ಮಾಣ 1220ರ ವೇಳೆಗೆ ಮುಗಿಯಿತು. ಅದನ್ನು ಉನ್ನತ ಗಾತಿಕ್ ಶೈಲಿಯ ಪ್ರಥಮ ಉತ್ತಮ ನಿದರ್ಶನವೆಂದು ಪರಿಗಣಿಸಲಾಗಿದೆ. ಅದರ ಪ್ರಮಾಣಗಳನ್ನು ಭಗ್ನಾವಶೇಷಕ್ಕೆ ಮೊದಲಿನ ಮಂದಿರದಲ್ಲಿ ಉಳಿದಿದ್ದ ಎರಡು ಗೋಪುರಗಳಿಂದ ನಿರ್ಧರಿಸಬೇಕಾಗಿತ್ತು; ಆದರೂ ಅದರ ಹೊರವಲಯಗಳಲ್ಲಿ ಅಳವಡಿಸಲಾದ ಬಡಾವಣೆಗಳು ಎರಡು ಪಾಶ್ರ್ವಗಳಲ್ಲಿ ಕಟ್ಟಲಾದ ಅಡ್ಡಭಾಗ ಅಥವಾ ಪಾಶ್ರ್ವಗುಡಿಗಳು ಅದಕ್ಕೊಂದು ಹೊಸ ವಿನ್ಯಾಸವನ್ನೂ ಒದಗಿಸಿದುವು. ಮಧ್ಯದ ಗಾಯನ ಹಜಾರ, ಪಾಶ್ರ್ವಗುಡಿಗಳು ಮತ್ತು ಮಧ್ಯಾಂಗಣಗಳು ಸಮಪ್ರಮಾಣದ ಸುಸಂಗತವಾದ ಅಂಗಗಳಾಗಿದ್ದುವು.
ಈ ಶೈಲಿಯ ಮತ್ತೊಂದು ನಿದರ್ಶನವಾದ ಬೂರ್ಜಿಯ ಮಂದಿರ ಇನ್ನೊಂದು ಉಪಶೈಲಿಯನ್ನು ಪ್ರತಿನಿಧಿಸುತ್ತದೆ. ಇಲ್ಲಿ ಪಾಶ್ರ್ವಗುಡಿಗಳನ್ನು ಕೈಬಿಟ್ಟು ಅದರ ಬದಲು ಮೊದಲಿದ್ದ ಒಂದು ಪಕ್ಕದ ಅಂಕಣದ ಬದಲು ಎರಡು ಅಂಕಣಗಳನ್ನು ಸುತ್ತಲೂ ಅಳವಡಿಸಲಾಯಿತು. ಪಕ್ಕದ ಅಂಕಣಗಳ ನಡುವೆ ಸಹ ಮೂರನೆ ಅಂತಸ್ತಿನ ಕಿಟಕಿಗಳನ್ನೂ ಉಪ್ಪರಿಗೆ ಪೀಠಪಂಕ್ತಿಗಳನ್ನೂ ನಿರ್ಮಿಸಲಾಗಿತ್ತು. ಅಂತೆಯೇ ಮಧ್ಯ ಹಜಾರದ ಎತ್ತರವನ್ನು ಹೆಚ್ಚಿಸಿ ಅಲ್ಲೂ ಉಪ್ಪರಿಗೆ ಪೀಠಪಂಕ್ತಿಗಳನ್ನೂ ವಾತಾಯನಗಳನ್ನೂ ನಿರ್ಮಿಸಲಾಯಿತು. ಆದರಿಂದ ಒಳಭಾಗಕ್ಕೆ ಹೆಚ್ಚು ಬೆಳಕು ಬರಲು ಸಾಧ್ಯವಾಯಿತು,

	ಈ ಎರಡರಲ್ಲಿ ಬೂರ್ಜೆಗಿಂತ ಚಾರ್ಟರ್ಸ್ ಹೆಚ್ಚು ಜನಪ್ರಿಯವೂ ಅನುಕರಣೀಯವೂ ಆಯಿತು. ಅದಕ್ಕೆ ಬೂರ್ಜೆಯ ಉದ್ಧತ ಮತ್ತು ಅನುಕರಣೀಯ ವಿನ್ಯಾಸ ಕಾರಣವೆಂದು ಹೇಳಬಹುದು. ಅಷ್ಟಾದರೂ ಅದರ ಕ್ರಿಸ್ತವಿಶ್ವಸೃಷ್ಟಿ ಮತ್ತು ಗಾತಿಕ್ ಶೈಲಿಯ ಮಹೋನ್ನತಿಗಳ ಹೆಚ್ಚಳ ಮೆಚ್ಚತಕ್ಕದ್ದಾಗಿದೆ.

	ರೀಮ್ಸ್ ಮತ್ತು ಏಮಿಯೆನ್ಸಿನ ಪ್ರಾರ್ಥನಾ ಮಂದಿರಗಳ ಚಾರ್ಟರ್ಸ್‍ನ ಉಪಶೈಲಿಯನ್ನು ಪರಿಪಕ್ವಗೊಳಿಸಿದವು. ಏಮಿಯೆನ್ಸಿನ ಮಧ್ಯ ಹಜಾರ ಉನ್ನತ ಗಾತಿಕ್ ಶೈಲಿಯ ಕಟ್ಟಡ ವಿನ್ಯಾಸ ಮತ್ತು ಪ್ರಯಾಣ ಸಮಾನತೆಯನ್ನು ಎತ್ತಿ ಹಿಡಿದಿದೆ ಮತ್ತು ಅದರ ಭವ್ಯತೆಯನ್ನು ಸಾರುತ್ತದೆ.

	ಸುಧಾರಿತ ಗಾತಿಕ್: 13ನೆಯ ಶತಕದ ಉತ್ತರಾರ್ಧ ಮತ್ತು 14ನೆಯ ಶತಮಾನಗಳಲ್ಲಿ ಸಮಾಜ ಸಂಪದ್ಭರಿತವಾಗಿತ್ತು. ಈ ವಿಪುಲತೆ ಕಲಾಸಂಪತ್ತಿನಲ್ಲಿ ಕಂಡುಬರುತ್ತದೆ. ವೈಭವೋಪೇತ ನಿರ್ಮಾಣಗಳಲ್ಲಿ ಅಸಾಧ್ಯವೆನಿಸುವ ಅಂಶಗಳನ್ನು ಅಳವಡಿಸುವ ಪ್ರಯತ್ನಗಳನ್ನು ಮಾಡಲಾಯಿತು. ಅದರ ಫಲವಾಗಿ ಕಲ್ಲಿನ ಗೋಡೆಗಳ ಉಪಯೋಗವನ್ನು ಬಹಳಷ್ಟು ಸೀಮಿತಗೊಳಿಸಿ, ಬೃಹತ್ತಾದ ಕಬ್ಬಿಣದ ಚೌಕಟ್ಟುಗಳಲ್ಲಿ ಜೋಡಿಸಿದ ಬಣ್ಣದ ಗಾಜುಗಳಿಂದ ವಿವಿಧ ರೀತಿಯ ಅಲಂಕಾರಗಳನ್ನು ಬಳಸಲಾಗಿದೆ. ಅವು ಕಟ್ಟಡಗಳ ಸುರಕ್ಷತೆಗೆ ಮಾರಕವಾಗಿ ಅಪರಿಮಿತ ವೆಚ್ಚದಿಂದ ನಿರ್ಮಿಸಿದ ಮಂದಿರಗಳು ಅನತಿಕಾಲದಲ್ಲಿಯೇ ಕುಸಿಯುವಂತಾಯಿತು. ವಿರಳವಾಗಿ ಬಳಸಿದ ಕಲ್ಲುಕಂಬುಗಳ ಮಧ್ಯೆ ವಿಶಾಲವಾದ ಕಿಟಕಿಗಳನ್ನು ಮತ್ತು ಅವುಗಳ ಕೆಳಗೆ ಕಮಾನು ದಾರಿಗಳನ್ನು ನಿರ್ಮಿಸಿ ಮಂದಿರಗಳ ಒಳಭಾಗದ ಸೌಂದರ್ಯಕ್ಕೆ ಮೆರುಗು ನೀಡಲಾಯಿತು. ಕಮಾನುಗಳಿಗೆ ವಿವಿಧ ಬಣ್ಣಗಳ ಗಾಜಿನ ಶಬಲ ಚಿತ್ರ ವಿನ್ಯಾಸದ ಅಲಂಕಾರ ಮಾಡಲಾಗಿತ್ತು. ಅದರಿಂದ ಮಂದಿರದ ಒಳಭಾಗ ವರ್ಣರಂಜಿತವಾಗಿರುತ್ತಿತ್ತು. ಈ ಎಲ್ಲ ಲಕ್ಷಣಗಳನ್ನು 1248ರಲ್ಲಿ ನಿರ್ಮಿಸಿದ ಸೆಂಟ್ ಪಾವೆಲ್ ಮಂದಿರದಲ್ಲಿ ಕಾಣಬಹುದು. 1247ರಲ್ಲಿ ನಿರ್ಮಿಸಿದ ಬೋವೇ ಪ್ರಾರ್ಥನಾಮಂದಿರದಲ್ಲಿ ಇನ್ನೂ ಹೆಚ್ಚಿನ ತಾಂತ್ರಿಕ ಸಾಹಸವನ್ನು ಕಾಣಬಹುದು. ಅದರ ಸಭಾಂಗಣದ ಕಮಾನು ಚಾವಣಿ 47.8 ಮೀಟರ್ ಎತ್ತರವಿತ್ತು. ಅದರ ಕಂಬಗಳು ದೂರದೂರ ಇದ್ದುದರಿಂದ ಭಾರ ತಡೆಯಲಾಗದೆ ಮುಖ್ಯ ಕಮಾನು ಹಜಾರ ಕುಸಿಯಿತು (1284). ಅನಂತರ ಕಂಬಗಳನ್ನು ದ್ವಿಗುಣಗೊಳಿಸಿ, ಸಹಾಯಕ ಒತ್ತುಗೋಡೆಗಳನ್ನು ಬಲಗೊಳಿಸಲಾಯಿತು. ಆದರೂ ಜೀರ್ಣೋದ್ದಾರ ಕಾರ್ಯ 16ನೆಯ ಶತಮಾನದ ತನಕ ಮುಂದುವರಿಯಿತು. ಆ ಸುಮಾರಿನಲ್ಲಿ ಜೀನ್ ವಾಸ್ಟ್ ಎಂಬುವನು ಪಾಶ್ರ್ವ ಮಂದಿರದ ಮೇಲೆ ಸು. 152 ಮೀಟರುಗಳೆತ್ತರದ ಒಂದು ಕಲ್ಲಿನ ಗೋಪುರ ನಿರ್ಮಿಸಿದನಾದರೂ ಅದು 1573ರಲ್ಲಿ ಕುಸಿದುಬಿತ್ತು. ಹಾಗಾಗಿ ಬೋವೇ ಪ್ರಾರ್ಥನಾಮಂದಿರ ಕಡೆಯವರೆಗೂ ಅಪೂರ್ಣವಾಗಿಯೇ ಉಳಿಯಿತು. ಉತ್ತರ ಫ್ರಾನ್ಸಿನ ಪ್ರಖ್ಯಾತ ವಾಸ್ತುಶಿಲ್ಪಿ ವಿಲ್ಲಾರ್ಡ್ ಡಿ ಹೊನೆಕೊರ್ಟ್ ಆ ಕಾಲದ ಹಲವಾರು ಪ್ರಾರ್ಥನಾಮಂದಿರಗಳನ್ನು ಸಂದರ್ಶಿಸಿ ಅವುಗಳ ಬಗ್ಗೆ ಬರೆದಿಟ್ಟಿರುವ ಟಿಪ್ಪಣಿಗಳು ಸಾಕಷ್ಟು ಮಾಹಿತಿಗಳನ್ನು ನೀಡುತ್ತವೆ. 14ನೆಯ ಶತಮಾನದ ಉತ್ತರಾರ್ಧ ಮತ್ತು 14-16ನೆಯ ಶತಮಾನಗಳ ಗಾತಿಕ್ ಶೈಲಿಯ ಅಂತ್ಯಕಾಲವೆಂದು ಹೇಳಲಾಗಿದೆ. ಆಗಿನ ಫ್ರೆಂಚ್ ಫ್ಲಾಂಬೊಯೆಂಟ್ ಶೈಲಿ ಬಹಳ ಗಮನಾರ್ಹವಾದ್ದು. ಈ ಶೈಲಿಯಲ್ಲಿ ಶಿಲ್ಪಕೆತ್ತನೆ ಅದ್ಭುತವಾಗಿತ್ತು; ಕಿಟಕಿಗಳ ಮೇಲ್ಭಾಗದಲ್ಲಿರುವ ವಕ್ರಾಕೃತಿಯ ತೆರಪು ಕೆತ್ತನೆ ಕೆಲಸ ಜ್ವಾಲೆಯ ಚಾಚಿದ ನಾಲಗೆಗಳಂತೆ ಕಾಣುತ್ತಿತ್ತು; ಮಿನುಗುವ ಪ್ರಕಾಶದ ಭ್ರಮೆಯನ್ನು ಉಂಟುಮಾಡುತ್ತಿತ್ತು. ಹೊಸ ಕಟ್ಟಡಗಳ ನಿರ್ಮಾಣಕ್ಕಿಂತ, ಆ ಮೊದಲ ಮಂದಿರಗಳಿಗೆ ಇಂಥ ಅಲಂಕರಣ ಮಾಡಲಾಗುತ್ತಿತ್ತು; ಲೂವಿಯರ್ಸಿನ ನಾಟ್ರಡೇಮ್ ಪ್ರಾರ್ಥನಾ ಮಂದಿರದಲ್ಲಿ ಈ ವಕ್ರ ಶಿಲ್ಪಾಲಂಕರಣವನ್ನು ಕಾಣಬಹುದಾಗಿದೆ.

	ಗಾತಿಕ್ ಶಿಲ್ಪ: ಆ ಯುಗದ ಶಿಲ್ಪಗಳು ಹೊಸ ಶೈಲಿಯ ಭಾವಪೂರ್ಣತೆಯನ್ನು ಸೂಚಿಸುತ್ತವೆ. ರೋಮನೆಸ್ಕ್ ಯುಗದಲ್ಲಿ ಜನಪ್ರಿಯವಾಗಿದ್ದ 'ಅಂತಿಮ ತೀರ್ಪು (ಲಾಸ್ಟ್ ಜಡ್ಜ್‍ಮೆಂಟ್) ಆ ಹಿಂದಿನ ವರ್ಣವೈಭವಕ್ಕೆ ಬದಲು ಮುಕ್ತಿಭಾವವನ್ನು ಸೂಚಿಸುವ ಹೊಸ ದೃಷ್ಟಿಕೋನದಿಂದ ನಿರೂಪಿತವಾಗುತ್ತಿತ್ತು. ಇದರೊಂದಿಗೆ ಇತರ ಅಲಂಕರಣ ದೃಶ್ಯಗಳು ಮತ್ತು ಸಾಂಕೇತಿಕ ಚಿತ್ರಗಳು ಸೇರಿಕೊಂಡು ವಿಶಾಲ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತಿದ್ದುವು. ಪಶ್ಚಿಮದ ಹೆಬ್ಬಾಗಿಲುಗಳ ಮೇಲೆ ಹಲವಿಧದ ಅಲಂಕರಣ ಶಿಲ್ಪಗಳು ಕಾಣಿಸಿಕೊಂಡಿದ್ದುವು; ಅರಸರ ಶಿಲ್ಪ ಪ್ರತಿಮೆಗಳನ್ನು ಅಂಥ ಹೆಬ್ಬಾಗಿಲುಗಳಲ್ಲಿ ನಿಲ್ಲಿಸಿರುತ್ತಿದ್ದುದರಿಂದ ಅವನ್ನು ರಾಜದ್ವಾರಗಳೆಂದು ಕರೆಯಲಾಗುತ್ತಿತ್ತು. ಚಾರ್ಟ್‍ರ್ಸಿನ ಪಶ್ಚಿಮದ್ವಾರದಲ್ಲಿ (1145-50) ಅಂಥ ಶಿಲ್ಪಗಳನ್ನು ಕಾಣಬಹುದು; ಅಲ್ಲಿಯ ಪಕ್ಕಪಕ್ಕದಲ್ಲಿರುವ ಮೂರು ಹೆಬ್ಬಾಗಿಲುಗಳಲ್ಲಿ ರಾಜರಾಣಿಯರ ಶಿಲ್ಪಗಳಿದ್ದರೆ ದ್ವಾರದ ಮೇಲಿನ ಬಲಬದಿಯ ಹಾಸುಗಲ್ಲಿನ ಮೇಲೆ ಕ್ರೈಸ್ತ ಜನನ, ದೇವಾಲಯದಲ್ಲಿ ಆತನ ಪ್ರಾತ್ಯಕ್ಷಿಕತೆ ಮತ್ತು ಕನ್ಯಾಮಾತೆ ಮೇರಿಯೊಡನಿರುವ ಭವ್ಯ ಶಿಲ್ಪಗಳೂ ಎಡಬದಿಯದರ ಮೇಲೆ ಆತನ ಸ್ವರ್ಗಾರೋಹಣ ದೃಶ್ಯಗಳೂ ಇವೆ. ಮೂರು ಹಾಸುಗಲ್ಲುಗಳು ಉದ್ದಕ್ಕೂ ಪ್ರಸರಿಸಿರುವ ಚಿತ್ರ ಪಟ್ಟಿಕೆಯಲ್ಲಿ ಕ್ರಿಸ್ತನ ಜೀವನದ ದೃಶ್ಯಗಳನ್ನು ನಿರೂಪಿಸಲಾಗಿದೆ. ಮಧ್ಯದ್ವಾರದ ಹಾಸುಗಳಲ್ಲಿನ ಮೇಲೆ ಕ್ರಿಸ್ತನ ಪುನರವತರಣವನ್ನು ತೋರಿಸಲಾಗಿದೆ. ಅದಲ್ಲದೆ ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ಅನೇಕ ದೃಶ್ಯಗಳನ್ನು ಕೆತ್ತಲಾಗಿದೆ. ಮಧ್ಯಯುಗದಲ್ಲಿ ರೂಪುಗೊಳ್ಳುತ್ತಿದ್ದ ವಾಸ್ತು ಮತ್ತು ಮೂರ್ತಿ ಶಿಲ್ಪಗಳ ಅವಿಭಾಜ್ಯ ಏಕರೂಪತೆ ಆ ನಿರ್ಮಾಣದಲ್ಲೂ ತಲೆದೋರಿದ್ದು. (ಉದಾಹರಣೆಗೆ ಕರ್ನಾಟಕದ ಹೊಯ್ಸಳರ ಆಂಧ್ರದ ಕಾಕತೀಯರ ಮತ್ತು ಒರಿಸ್ಸದ ವಾಸ್ತುಶಿಲ್ಪ ಶೈಲಿಗಳಲ್ಲಿ ಅಂಥ ಬೆಳವಣಿಗೆಯನ್ನು ಕಾಣಬಹುದು) ಆ ವಾಸ್ತುಶಿಲ್ಪದಲ್ಲಿ ಸಮ್ಮಿಳಿತವಾದ ಮೂರ್ತಿಶಿಲ್ಪಗಳು ರೋಮನೆಸ್ಕ್ ಮೂರ್ತಿಶಿಲ್ಪಗಳನ್ನು ಹೋಲುತ್ತಿದ್ದರೂ ಹಲವು ವ್ಯತ್ಯಾಸಗಳು ಗಮನಾರ್ಹ. ಗೋಡೆಕಂಬಗಳಿಂದ ಪ್ರತ್ಯೇಕವಾಗಿರುವಂತೆ ಈ ಪ್ರತಿಮೆಗಳು ಭಾಸವಾಗುತ್ತವೆ; ಇವುಗಳ ಸಹಜತೆ ಮತ್ತು ಉಡಿಗೆ ತೊಡಿಗೆಗಳು ಗಾತಿಕ್ ಶೈಲಿಯ ನೈಜತೆಯ ದ್ಯೋತಕಗಳಾಗಿವೆ. ಕ್ರಮೇಣ ಸಹಜತೆ ಆದರ್ಶವಾಯಿತು ಅನಂತರ ನಿರ್ದಿಷ್ಟ ವ್ಯಕ್ತಿಗಳ ಪ್ರತಿಕೃತಿಗಳು ಮೂಡಿದುವು.

	ಉನ್ನತ ಗಾತಿಕ್ ಯುಗದಲ್ಲಿ ಮೂರ್ತಿಶಿಲ್ಪಕಲೆ ಅತ್ಯುಚ್ಚ ಮಟ್ಟ ತಲುಪಿತು, ಅದು ವ್ಯಾಪಕವಾಯಿತು. ಆಗಿನ ಹೆಚ್ಚು ಶಿಲ್ಪಗಳು ಸಾಂಕೇತಿಕವಾದವು; ಆ ಯುಗದ ಭಾವನೆಗಳನ್ನು ಪ್ರತಿಬಿಂಬಿಸುವ ಮತ್ತು ಧಾರ್ಮಿಕ ಶ್ರದ್ಧೆಯನ್ನು ರೂಪಿಸುವ ಲಕ್ಷಣಗಳು ಗಮನಾರ್ಹವಾಗಿದ್ದುವು. ಚಾರ್ಟರ್ಸಿನ ನಾಟರ್‍ಡೇಮ್ ಮಂದಿರದ ಮೂರ್ತಿ ಶಿಲ್ಪಗಳು ಗಾತಿಕ್ ಶಿಲ್ಪಗಳ ಕ್ರಮಾಗತ ಬೆಳವಣಿಗೆಗಳನ್ನು ವಿಧಿವತ್ತಾಗಿ ನಿರೂಪಿಸುತ್ತವೆ. ವಮಿಯಿನ್ಸ್ ಪ್ರಾರ್ಥನಾಮಂದಿರದ ಪಶ್ಚಿಮ ಮುಖಭಾಗದ ಮಧ್ಯ ಹೆಬ್ಬಾಗಿಲ ಮೇಲಿರುವ ಬೋಧನೆ ಮಾಡುತ್ತಿರುವ ಕ್ರಿಸ್ತನ ಶಿಲ್ಪ ಈ ಶೈಲಿಯ ಉತ್ತಮ ನಿದರ್ಶನ. ಸುಧಾರಿತ ಗಾತಿಕ್ ಯುಗದ ಶಿಲ್ಪಗಳಲ್ಲಿ ರೀಮ್ಸ್ ಪ್ರಾರ್ಥನಾಮಂದಿರದ ಪಶ್ಚಿಮ ಮುಖಭಾಗದ ಮೇಲಿರುವವು ಉತ್ತಮವಾದವು. ಅಲ್ಲಿರುವ ನಾಲ್ಕು ಸ್ತ್ರೀ ಮೂರ್ತಿಗಳು ಪೌರಾಣಿಕ ಘಟನೆಗಳನ್ನು ನಿರೂಪಿಸುತ್ತವೆ. ಈ ನಿರೂಪಗಳು ನೈಜ ಸರಳ ಭಾವಪೂರ್ಣವಾಗಿ ಮನೋಹರವಾಗಿವೆ. ಅಂಥ ಲಕ್ಷಣಗಳನ್ನು ಸಮಕಾಲೀನ ಹಸ್ತಪ್ರತಿಗಳ ಮೇಲಿನ ವರ್ಣಚಿತ್ರಗಳಲ್ಲೂ ಕಾಣಬಹುದು. ಇಂಥ ಚಿತ್ರಗಳಲ್ಲಿ ತೆಳುವಾದ ಕಂಬಗಳು, ಸೂಕ್ಷ್ಮವಾದ ಶಿಲ್ಪಗಳು ಕಂಡುಬರುತ್ತವೆ; ನಿಜವಾದ ನಿರ್ಮಾಣಗಳಲ್ಲಿ ಯಾವುದು ಬಾಳಿಕೆ ಬರುತ್ತಿರಲಿಲ್ಲವೋ ಅಂಥ ಕಾಲ್ಪನಿಕ ಸೂತ್ರಗಳನ್ನು ಬಳಸಲಾಗಿದೆ. ಅವು ಆ ವಾಸ್ತು ಶಿಲ್ಪಗಳ ಭಾವನಾತ್ಮಕ ಸೂತ್ರಗಳ ದ್ಯೋತಕಗಳಾಗಿವೆ. ಗಾತಿಕ್ ಕಲೆ ಫ್ರೆಂಚ್ ಮೂಲದ್ದೆಂದು ಭಾವಿಸಲಾಗಿದ್ದರೂ ಅದರ ಪ್ರಧಾನ ಲಕ್ಷಣಗಳು ಫ್ರಾನ್ಸಿನಲ್ಲಿ ಹುಟ್ಟಿಕೊಂಡರೂ, ಪಾಶ್ಚಾತ್ಯ ಯೂರೊಪಿನ ಎಲ್ಲ ದೇಶಗಳಲ್ಲೂ ಆ ಕಲೆ ಪ್ರಸರಿಸಿತು. ಆದರೆ ಆಯಾ ಪ್ರಾದೇಶಿಕ ವೈಪರೀತ್ಯಗಳು ಸ್ವಲ್ಪಮಟ್ಟಿಗೆ ತಲೆದೋರಿದವು.

	ಗಾತಿಕ್ ಯುಗದ ಕೊನೆಗಾಲದಲ್ಲಿ ಮೂರ್ತಿಶಿಲ್ಪ ಕೆಲವು ವಿಶಿಷ್ಟ ಲಕ್ಷಣಗಳನ್ನು ಬೆಳೆಸಿಕೊಂಡಿತು; ಅವನ್ನು ಮರಣ ಸಂಬಂಧವಾದ ಶಿಲ್ಪಗಳಲ್ಲಿ ಗುರುತಿಸಬಹುದಾಗಿದೆ. ಮೊದಲಿಗೆ ಶವತೊಟ್ಟಿಗಳ ಮೇಲೆ ಸಾಧಾರಣ ಮಾನವ ಮೂರ್ತಿಯನ್ನು ಕೆತ್ತುತ್ತಿದ್ದರೆ ಕ್ರಮೇಣ ಸತ್ತವನ ನೈಜಪ್ರತಿಕೃತಿಯನ್ನು ರೂಪಿಸಲು ಯತ್ನಿಸಲಾಯಿತು. ಸೇಂಟ್ ಡೆನಿಸ್ ಬಳಿಯ ಸಮಾಧಿಗಳಲ್ಲಿ ಈ ಪ್ರಯತ್ನವನ್ನು ಕಾಣಬಹುದು. 1340ರ ಸುಮಾರಿನ ನಾಲ್ಕನೆಯ ಫಿಲಿಪನದು ಗಾತಿಕ್ ಶಿಲ್ಪದ ಪ್ರಥಮ ಭಾವಚಿತ್ರವೆಂದು ಹೇಳಲಾಗಿದೆ. ಪ್ರಸಿದ್ಧ ಫ್ರೆಂಚ್ ಸೇನಾನಿ ಬಟ್ರ್ರೆಂಡ್ ಡುಗ್ವೆಸ್‍ಕ್ಲಿನ್ 1380ರ ಪ್ರತಿಕೃತಿಯಲ್ಲಿ ಎಲ್ಲ ವಿವರಗಳನ್ನು ರೂಪಿಸಲಾಗಿದೆ. ಈ ಕಾರಣಗಳಿಂದ ಶಾಶ್ವತ ಸ್ಮಾರಕ ಶಿಲ್ಪಗಳ ನಿರ್ಮಾಣಕ್ಕೆ ಗಮನವೀಯಲಿಲ್ಲ.

	ಬೌದ್ಧಿಕ ಕ್ರಾಂತಿಯುಗ; 15ನೆಯ ಶತಮಾನದ ಬೌದ್ಧಿಕ ಕ್ರಾಂತಿಯುಗಕ್ಕೆ ಸೇರಿದ ವಾಸ್ತು ಮೂರ್ತಿಶಿಲ್ಪಗಳು ಹೆಚ್ಚಾಗಿ ಕಂಡುಬರದಿದ್ದರೂ 16ನೆಯ ಶತಮಾನದಲ್ಲಿ ಇಟಲಿ ಪ್ರಭಾವಿತ ನಿರ್ಮಾಣಗಳನ್ನು ಫ್ರಾನ್ಸಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಣುತ್ತೇವೆ. ಆ ಮೊದಲು ಪ್ರಧಾನವಾಗಿದ್ದ ಮತೀಯ ನಿರ್ಮಾಣಗಳ ಪ್ರಾಧಾನ್ಯ ಕ್ಷೀಣಿಸಿ ರಾಜಸಂಬಂಧಿ ಸಾರ್ವಜನಿಕ ಕಟ್ಟಡಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಿತು. ಮೊದಲನೆಯ ನಿರ್ಮಾಣ ಚಂಬಾರ್ಡನ ಕೋಟೆ ಮನೆ. ಕೋಟೆ ಮನೆಗಳಲ್ಲಿ ವಿಶಾಲಪ್ರಾಂಗಣದ ನಡುವೆ ಚತುರಸ್ರಾಕಾರದ ಮಂದಿರ, ಅದರ ನಾಲ್ಕು ದಿಕ್ಕುಗಳಲ್ಲಿ ವೃತ್ತಾಕಾರದ ಗೋಪುರಗಳು, ಹೊರವಲಯದಲ್ಲಿ ಮೂರುಕಡೆ ಕೋಣೆಗಳ ಸಾಲುಗಳು ಮತ್ತು ಅವೆಲ್ಲವನ್ನು ಸುತ್ತುವರಿದಂತೆ ಕಂದಕ ಇರುತ್ತಿದ್ದುವು. ಚಂಬಾರ್ಡನ್ ಕೋಟೆ ಮನೆ ಸರಳವಾಗಿದೆ. ಅದರ ಲಂಬ ಮತ್ತು ಅಡ್ಡ ಚದರಗಳು ಎದ್ದುಕಾಣುತ್ತವೆ. ಆದರೆ ಅದರ ಚಾವಣಿಯಲ್ಲಿ ಬಹಳಷ್ಟು ಅಲಂಕರಣ ಅಂಶಗಳಿವೆ.

	ಈ ಕಟ್ಟಡಗಳಲ್ಲಿ ಮೂಲತಃ ಫ್ರೆಂಚ್ ವಾಸ್ತು ಲಕ್ಷಣಗಳು ಗಮನಾರ್ಹವಾದರೆ, 1546-76ರ ನಡುವೆ 2ನೆಯ ಹೆನ್ರಿಯ ಕಾಲದಲ್ಲಿ ಕಟ್ಟಲಾದ ಪ್ಯಾರಿಸ್ ಬಳಿಯ ಲೂರ್ ಅರಮನೆ ಇಟಲಿ ವಾಸ್ತುಶಿಲ್ಪದ ಪ್ರಭಾವವನ್ನು ಸೂಸುವ ಪ್ರಧಾನ ನಿರ್ಮಾಣ, ವಾಸ್ತುಶಿಲ್ಪಿ ಪಯರ್ ಲೆಸ್ಕಾರ್ ಮತ್ತು ಶಿಲ್ಪಿ ಜೀನ್ ಗೌಜಾóನ್ ರೂಪಿಸಿದ ಈ ಕಟ್ಟಡ ಫ್ರಾನ್ಸಿನ ಬೌದ್ಧಿಕ ಕ್ರಾಂತಿಯುಗದ ಅತ್ಯುತ್ತಮ ಕಟ್ಟಡ. ಮೂರು ಅಂತಸ್ತುಗಳ ಈ ಕಟ್ಟಡದಲ್ಲಿ ಕೆಳ ಅಂತಸ್ತಿನ ರೋಮನ್ ಕಮಾನುದ್ವಾರಗಳು. ಅರೆಗಂಬಗಳು ಸಾಕಷ್ಟು ನೆರಳು ಬೆಳಕಿನಾಟಕ್ಕೆ ಪ್ರಾಶಸ್ತ್ಯ ಕೊಟ್ಟಿರುವುದರಿಂದ ಅದರ ಮೇಲೆ ಕೆತ್ತನೆಗಳು ಎದ್ದು ಕಾಣುವುದಿಲ್ಲ. ಎರಡನೆಯ ಅಂತಸ್ತಿನಲ್ಲಿರುವ ವಿಶಾಲ ಕಿಟಿಕಿಗಳು ಸಣ್ಣವಾಗಿದ್ದು ಹಿಂದೆಸರಿದಂತೆ ಕಾಣುತ್ತವೆ. ಬಾಗಿದ ಚಾವಣಿ ಸುತ್ತ ಅದರ ಎತ್ತರವನ್ನು ಮೊಟಕುಗೊಳಿಸಿದೆ. ಪ್ರತಿ ಅಂತಸ್ತಿನ ಮುನ್‍ಚಾಚಿದ ಸೂರು ಕಟ್ಟಡದ ಸಮತಲಭಾವನೆಯನ್ನು ಹೆಚ್ಚಿಸುತ್ತದೆ.

	ಆಗಿನ ಮೂರ್ತಿ ಶಿಲ್ಪಗಳಲ್ಲಿ ಗಾತಿಕ್ ಮತ್ತು ಬೌದ್ಧಿಕ ಕ್ರಾಂತಿಯುಗಗಳೆರಡರ ಛಾಯೆಯನ್ನೂ ಕಾಣಬಹುದು. ಮೈಕೇಲ್ ಕೊಲಂಬೆಯ ಎರಡು ಆಯಾಮಗಳ ಚಪ್ಪಟೆ ವಿನ್ಯಾಸದ ಜಾರ್ಜ್ ಮತ್ತು ಡ್ರೇಗನ್ (1508-09) ಕೃತಿಯಲ್ಲಿ ಫ್ಲಾರೆನ್ಸಿನ ಹೊಸ ಲಕ್ಷಣಗಳು ತಲೆದೋರಲಾರಂಭಿಸಿದುವು. ಫ್ಲಾಂಟೇನಬ್ಲೋದಲ್ಲಿ ಸೆಲ್ಲಿನಿ ತನ್ನ ಡಯಾನಾ ರಚನೆಯಲ್ಲಿ ಇಲ್ ರೋಸೋ ಮತ್ತು ಪ್ರಿಮಾಟಿಯೋ ತಮ್ಮ ಗಾರೆಯ ಶಿಲ್ಪಗಳಲ್ಲಿ ಫ್ಲಾಂಟೇನಬ್ಲೋದಲ್ಲಿ ಈ ಹೊಸ ಶೈಲಿಯಲ್ಲಿ ಬೆಳೆಸಿದ್ದಾರೆ ಜೀನ್ ಗೌಜಾನ್ ತನ್ನ ಕರ್ಯಾಟಿಡ್ಡ ಮತ್ತು ಅಪ್ಸರೆಯರು ಕೃತಿಗಳಲ್ಲಿ ಆ ಕಾಲದ ಇಟಾಲಿಯನ್ ಪ್ರಭಾವಿತವಾದ ಅತ್ಯುತ್ತಮ ಕೃತಿಗಳನ್ನು ನಿರ್ಮಿಸಿದ್ದಾನೆ.

	16ನೆಯ ಶತಮಾನದ ಉದ್ದಕ್ಕೂ ಫ್ರಾನ್ಸಿನಲ್ಲಿ ಇಟಾಲಿಯನ್ ವಾಸ್ತುಶಿಲ್ಪದ ಪ್ರಭಾವಗಳು ಬೆಳೆಯುತ್ತಿದ್ದರೂ ಫ್ರೆಂಚ್ ಲಕ್ಷಣಗಳು ಸಂಪೂರ್ಣವಾಗಿ ಕಣ್ಮರೆಯಾಗಲಿಲ್ಲ. ಗಾತಿಕ್ ಲಕ್ಷಣಗಳು ಉಳಿದುಬರುತ್ತಿದ್ದವು. ಆದರೆ 17ನೆಯ ಶತಮಾನದಲ್ಲಿ ಫ್ರೆಂಚ್ ವಾಸ್ತುಶಿಲ್ಪಗಳು ರಾಜಕೀಯ ಪ್ರಭಾವಗಳ ದೆಸೆಯಿಂದ ಹೆಚ್ಚು ಧೈರ್ಯ ವಹಿಸಿ ಮಧ್ಯಯುಗೀನ ಗಾತಿಕ್ ಅಂಶಗಳನ್ನು ತೊರೆದು ಹೊಸಯುಗದ ಇಟಾಲಿಯನ್ ವಾಸ್ತುಲಕ್ಷಣಗಳನ್ನು ಅಳವಡಿಸಿಕೊಳ್ಳಲಾರಂಭಿಸಿದರು. ಆ ಕಾಲದ ನಿರ್ಮಾಣಗಳು ವೈಶಿಷ್ಟ್ಯಗಳನ್ನು ಫ್ರಾಂಕಾಯ್ ಮನ್ಸಾರ್ಟ್‍ನ (1589-1666) ಕೃತಿಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಹಿಂದಿನ ಶತಮಾನದ ನಿರ್ಮಾಣಗಳ ಮಾದರಿಯ ಆಯಾಕಾರದ ಅಂಗಗಳು ಈ ಶೈಲಿಯ ಪ್ರಮುಖ ಲಕ್ಷಣ. ಕಟ್ಟಡದ ಪ್ರಮಾಣವನ್ನು ಹೆಚ್ಚಿಸಲು ಚದರ ಅಂಗಗಳನ್ನು ಹೆಚ್ಚು ಸಂಖ್ಯೆಯಲ್ಲಿ ಜೋಡಿಸಲಾಗುತ್ತಿತ್ತು. ಆದರೂ ಕಟ್ಟಡದ ಮಧ್ಯಭಾಗದಲ್ಲಿ ಇರುತ್ತಿದ್ದ ಕಂಬಗಳ ಸಾಲಿನ ಮುಖಮಂಟಪ ಅದರ ಏಕತೆಯನ್ನು ಎತ್ತಿ ಹಿಡಿಯುತ್ತಿತ್ತು. ಮನ್ಸಾರ್ಟಿ ವಿನ್ಯಾಸ ನಿರೂಪಣೆಯಲ್ಲಿ ಸ್ವಾತಂತ್ರ್ಯ ವಹಿಸಿ ಬದಲಾವಣೆಗಳನ್ನು ಮಾಡಿಕೊಂಡು ಸ್ವಂತಿಕೆ ತೋರಿದ್ದಾನೆ. ಆತನ ಕಟ್ಟಡಗಳಲ್ಲಿ ಬ್ಲಾಯಿಸ್ ಕೋಟೆ ಮನೆಯ ಆರ್ಲಿಯನ್ಸ್ ವಿಭಾಗ (1635-38) ವಿಶಿಷ್ಟವಾದ್ದು ಕ್ಲಾಡ್ ಪೆರೋ (1613-1688), ಲೂಯಿ ಲೆವೊ (1612-1670) ಮತ್ತು ಚಾಲ್ರ್ಸ್ ಲೆಬ್ರುನ್ (1619-1690) ಸೇರಿ ನಿರ್ಮಿಸಿದ ಲೂರ್‍ನ ಪೂರ್ವಭಾಗದ ಮುಖಮಂಟಪ (1665) ಬಹಳ ಆಕರ್ಷಕವಾಗಿದೆಯಾದರೂ ಯಾವುದೇ ಅಶಾಸ್ತ್ರೀಯ ನಿಯಮಗಳನ್ನು ಬಳಸಿಕೊಂಡಿಲ್ಲ. ಆ ಶತಮಾನದ ಕೊನೆಯಲ್ಲಿ ಫ್ರಾಂಕಾಯ್‍ನ ಮೊಮ್ಮಗ ಜೂಲೆ ಹಾರ್ಡೂಯ್ನ್ ಮನ್ಸಾರ್ಟ್ ತನ್ನ ಇನ್‍ವ್ಯಾಲಿಡ್ ಮಂದಿರದಲ್ಲಿ ನಯವಾದ ರಮ್ಯತೆಯನ್ನು ಸಾಧಿಸಿದ್ದಾನೆ.

	ಆಗಿನ ಉದ್ಯಾನಗಳು ವಾಸ್ತುಶಿಲ್ಪದ ಒಂದು ಅಂಗವಾಗಿ ಪ್ರಕೃತಿಸೊಬಗಿನ ನಿರೂಪಣೆಗೆ ಪುಷ್ಟಿ ಕೊಟ್ಟಿದ್ದುವು. ಆ ಕಾಲದಲ್ಲಿ ಹುಟ್ಟಿದ ಬರೋಕ್ ಮತ್ತು ರೊಕೋಕೊ ಶೈಲಿಗಳ ಅಂಶಗಳು ಕ್ರಮೇಣ ವಾಸ್ತು ನಿರ್ಮಾಣಗಳಲ್ಲಿ ತಲೆದೋರಲಾರಂಭಿಸಿದುವು. ಈ ಶೈಲಿಗಳ ಸಮನ್ವಯವನ್ನು 1737-1740ರ ನಡುವೆ ನಿರ್ಮಿತವಾದ ಪ್ಯಾರಿಸ್ ಬಳಿಯ ಹೊಟೇಲ್ ಡಿ ಸಾಬೀಸ್‍ನಲ್ಲಿ ಕಾಣಬಹುದು. ಸೂಕ್ಷ್ಮ ಪ್ರಮಾಣ, ಸುಲಭ ತಿರುವುಗಳು ತಿಳಿಯಾದ ಬಣ್ಣಗಳಿಂದ ಮೂಡಿದ ಅಂತಕರಣ ಮತ್ತು ಕನ್ನಡಿಗಳ ಬಳಕೆ ರೊಕೋಕೊ ಶೈಲಿಯ ಪ್ರಧಾನ ಲಕ್ಷಣಗಳು.

	ಫ್ರಾನ್ಸಿನ ಬರೋಕ್ ಶೈಲಿಯ ಮೂರ್ತಿಶಿಲ್ಪ ಕಲೆ ವಾಸ್ತುಶಿಲ್ಪಕಲೆಯಂತೆ ವೈಶಿಷ್ಟ್ಯ ಪೂರ್ಣವಾಗಿಲ್ಲ; ಹೆಚ್ಚು ಕಡಿಮೆ ಇಟಲಿಯ ಮಾದರಿಯದಾಗಿತ್ತು. ಪಿಯರೆ ಪುಜೆಟ್ (1620-1694) ಮೊದಲಾದವರು ಇಟಲಿಯ ಬೆರ್ನಿನಿಯನ್ನು ಅನುಕರಿಸಿದರೆ, ಫ್ರಾಂಕಾಯ್ ಗಿರರ್ಡಾನ (1628-1715) ಮುಂತಾದವರು ಫ್ರೆಂಚ್ ಶೈಲಿಯ ಲಕ್ಷಣಗಳನ್ನು ಹೆಚ್ಚಾಗಿ ಉಳಿಸಿಕೊಂಡಿದ್ದರು. ಆ ಶಿಲ್ಪಗಳು ಉದ್ಯಾನಗಳ ಅಲಂಕರಣ ಸಾಧನಗಳಾಗಿ ಗಮನಾರ್ಹವಾದರೂ ಸ್ವತಂತ್ರ ಶಿಲ್ಪ ಕೃತಿಗಳಾಗಿ ಗಮನ ಸೆಳೆಯುವುದಿಲ್ಲ, ವರ್ಸೇಲ್ಸಿನ ಉದ್ಯಾನಗಳಲ್ಲಿ ಅಂಥ ಶಿಲ್ಪಗಳನ್ನು ಕಾಣಬಹುದು. ರೊಕೋಕೊ ಶೈಲಿಯ ಶಿಲ್ಪಗಳ ಹೆಚ್ಚು ಆಕರ್ಷಕವಾಗಿವೆ. ಸಣ್ಣ ಆಕಾರದ ಮೋಹಕ ಕೃತಿಗಳಿಗೆ ಹೆಚ್ಚು ಬೇಡಿಕೆಯಿದ್ದುದರಿಂದ ಮೈಕೇಲ್ ಕ್ಲಾಡಿಯಸ್ (1730-1814), ಎಟಿಯೆನ್ ಫಾಲ್ಕನೆಟ್ (1716-1791) ಮೊದಲಾದವರು ಜೇಡಿಮಣ್ಣು, ಅಮೃತಶಿಲೆ ಮತ್ತು ಪಿಂಗಾಣಿಗಳಲ್ಲಿ ಸೊಗಸಾದ ಗೊಂಬೆಗಳನ್ನು ಅಧಿಕ ಸಂಖ್ಯೆಯಲ್ಲಿ ನಿರ್ಮಿಸಿದ್ದಾರೆ. ಜೇನ್ ಅಂಟಾಯ್ನೆ ಹೂಡನ್ (1741-1828) ಆ ಯುಗದ ಪ್ರಸಿದ್ಧ ಶಿಲ್ಪಿ, ಅವನು ಭಾವಶಿಲ್ಪಗಳನ್ನು ಬಹಳ ಸುಂದರವಾಗಿ ರೂಪಿಸುತ್ತಿದ್ದ. ಅವನು ಮಾಡಿದ ವಾಲ್ಟೇರನ ಭಾವಶಿಲ್ಪ (1781) ಮತ್ತು ಜೇಡಿಮಣ್ಣಿನಲ್ಲಿ ನಿರ್ಮಿಸಿದ ಲೂಯಿ ಬ್ರೊಗ್ನಿಯಾರ್ಟನ ಗೊಂಬೆ (1778) ಬಹಳ ಪ್ರಸಿದ್ದವಾದುವು.

	19ನೆಯ ಮತ್ತು 20ನೆಯ ಶತಮಾನಗಳಲ್ಲಿ ಯೂರೋಪ್ ಮತ್ತು ಅಮೆರಿಕಾದ್ಯಂತ ಆಧುನಿಕ ವಾಸ್ತುಶಿಲ್ಪ ಶೈಲಿಗಳು ಅಸ್ತಿತ್ವಕ್ಕೆ ಬಂದುವು. ಆ ಶೈಲಿಗಳ ಪಿಕ್ಚರೆಸ್ಕ್ ಎಕ್ಲೆಕ್ಟಿಸಿಸಮ್, (ಆಕರ್ಷಕ ಚಿತ್ರ ಸಾರಸಂಗ್ರಹತೆ) ರೊಮ್ಯಾಂಟಿಕ್ ನ್ಯಾಚುರಲಿಸಮ್ (ರೊಮ್ಯಾಂಟಿಕ್ ನೈಸರ್ಗಿಕತೆ) ಮತ್ತು ರೊಮ್ಯಾಂಟಿಕ್ ಕ್ಲಾಸಿಸಮ್ (ರೊನ್ಯಾಂಡಿಕ್ ಅಭಿಜಾತತೆ) ಎಂಬ ಮೂರು ಪದ್ಧತಿಗಳು ಬಳಕೆಯಲ್ಲಿದ್ದುವು. ಆ ಮೂರು ಪದ್ಧತಿಗಳೂ ಹೆಚ್ಚು ಕಡಿಮೆ ಸಮಕಾಲೀನವಾಗಿದ್ದುವು. ಫ್ರಾನ್ಸಿನಲ್ಲಿ ಈ ಶೈಲಿಗಳ ಹಲವಾರು ಸರಕಾರಿ ಮತ್ತು ಸಾರ್ವಜನಿಕ ಕಟ್ಟಡಗಳು ನಿರ್ಮಾಣಗೊಂಡಿವೆಯಾದರೂ ಅವುಗಳಲ್ಲಿ ಯಾವುದೇ ವಿಶಿಷ್ಟವಾದ ಫ್ರೆಂಚ್ ಪ್ರತ್ಯೇಕ ಲಕ್ಷಣಗಳು ಕಾಣಬರುವುದಿಲ್ಲವಾದ್ದರಿಂದ ಅವುಗಳ ಬಗೆಗೆ ವಿವರಗಳನ್ನು ನೀಡಬೇಕಾದ ಅಗತ್ಯವಿಲ್ಲ.		(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ